ನ್ಯೂಸ್ ನಾಟೌಟ್ : ಕಾಸರಗೋಡಿನಿಂದ ದಿಢೀರ್ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕರು ಉಡುಪಿಯಲ್ಲಿ ಪತ್ತೆಯಾಗಿದ್ದು ಇದೀಗ ಪ್ರಕರಣ ಸುಖಾಂತ್ಯ ಕಂಡಿದೆ.ಮಕ್ಕಳು ಮನೆಯಿಂದ ನಾಪತ್ತೆಯಾಗಿದ್ದರಿಂದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಇದೀಗ ಮಕ್ಕಳು ವಾಪಸ್ ಹೆತ್ತವರ ಮಡಿಲು ಸೇರಿದ್ದರಿಂದ ಮನೆ ಮಂದಿಯ ಮುಖದಲ್ಲಿ ನಗು ತರಿಸಿದೆ.
ಮೂಲತಃ ಕಾಸರಗೋಡಿನ ಹದಿನೈದು ವರ್ಷ ಪ್ರಾಯದ ನಾಲ್ವರು ಮಕ್ಕಳು ಎಂದಿನಂತೆ ಶಾಲೆಗೆ ತೆರಳಿದ್ದರು, ಸಂಜೆ ಶಾಲೆಯಿಂದ ಬಂದು ಆಟಕ್ಕೆ ತೆರಳಿದ್ದರು. ಆಟವಾಡಲೆಂದು ಹೋದವರು ಎಷ್ಟು ಹೊತ್ತಾದರೂ ಮನೆಗೇ ಬರಲಿಲ್ಲ. ಮನೆ ಮಂದಿ ಗಾಬರಿಯಾದರು. ಪೊಲೀಸರಿಗೆ ದೂರನ್ನು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು. ಮಂಗಳೂರು ಸೇರಿ ಕರ್ನಾಟಕದ ವಿವಿಧ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಓರ್ವ ಬಾಲಕನಲ್ಲಿ ಮೊಬೈಲ್ ಫೋನ್ ಇದ್ದು ಲೊಕೇಶನ್ ಟ್ರೇಸ್ ಮಾಡಿದಾಗ ಉಡುಪಿಯಲ್ಲಿರುವುದಾಗಿ ಮಾಹಿತಿ ಲಭಿಸಿತು. ಮಕ್ಕಳನ್ನು ರಾತ್ರಿಯೇ ವಶಕ್ಕೆ ಪಡೆದು ಪೋಷಕರಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಮಕ್ಕಳನ್ನು ಕೌನ್ಸಿಲಿಂಗ್ ಮಾಡಿದಾಗ ಗೋವಾಕ್ಕೆ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟು ಬಂದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.