ನ್ಯೂಸ್ ನಾಟೌಟ್: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia And Pakistan) ನಡುವಿನ ಪಂದ್ಯದಲ್ಲಿ ಪಾಕ್ ಅಭಿಮಾನಿಯೊಬ್ಬ (Pakistani Fan) ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಇದೀಗ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಆಸ್ಟ್ರೇಲಿಯಾ – ಪಾಕಿಸ್ತಾನ (PAK vs AUS) ಪಂದ್ಯ ನಡೆಯುತ್ತಿದ್ದ ವೇಳೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಯೊಬ್ಬ ʻಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿದ್ದಾನೆ. ಈ ವೇಳೆ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರು ʻಪಾಕಿಸ್ತಾನ್ ಜಿಂದಾಬಾದ್ʼ ಕೂಗುವಂತಿಲ್ಲ ಎಂದು ತಡೆಯೊಡ್ಡಿದ ನಂತರ ಕೆಲಕಾಲ ವಾಗ್ದಾದ ನಡೆದಿದೆ.
ಪಾಕ್ ಅಭಿಮಾನಿ ಜಿಂದಾಬಾದ್ ಘೋಷಣೆ ಕೂಗಲು ಪೊಲೀಸ್ ಅಧಿಕಾರಿ ತಡೆಯೊಡ್ಡಿದಾಗ ಪಾಕ್ ಅಭಿಮಾನಿ, ನಾನು ಪಾಕಿಸ್ತಾನದವನು, ಪಾಕಿಸ್ತಾನ್ ಜಿಂದಾಬಾದ್ (Pakistan zindabad) ಅನ್ನದೇ ಇನ್ನೇನು ಹೇಳಬೇಕು? ಭಾರತ್ ಮಾತಾಕಿ ಜೈ ಅನ್ನುವಾಗ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾಕೆ ಹೇಳಬಾರದು? ಎಂದು ಅಧಿಕಾರಿಯನ್ನ ಪ್ರಶ್ನಿಸಿದ್ದಾರೆ.
ಬಳಿಕ ಅಧಿಕಾರಿಯ ನಡೆಯನ್ನ ವೀಡಿಯೋ ಮಾಡಿಕೊಂಡಿದ್ದಾನೆ. ಪೊಲೀಸ್ ಅಧಿಕಾರಿ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದೆ ಸಾಗುತ್ತಿದ್ದಂತೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲು ಶುರು ಮಾಡಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಪಾಕಿಸ್ತಾನಿ ತನ್ನ ದೇಶಕ್ಕಾಗಿ ಹುರಿದುಂಬಿಸಲು ಅವಕಾಶ ನೀಡದಿರುವುದು ನಾಚಿಕೆಗೇಡಿನ ಸಂಗತಿ. ಪಾಕಿಸ್ತಾನದ ಒಬ್ಬ ಅಭಿಮಾನಿ ತನ್ನ ದೇಶದ ಪರ ಘೋಷಣೆ ಕೂಗಲು ಬಿಡುತ್ತಿಲ್ಲವೆನ್ನೋದು ಖಂಡನೀಯ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದನ್ನು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ವರದಿ ತಿಳಿಸಿದೆ.