ನ್ಯೂಸ್ ನಾಟೌಟ್ : ಇತ್ತೀಚಿನ ದಿನಗಳಲ್ಲಿ ಮಕ್ಕಳ ಕಳ್ಳರು ಹೆಚ್ಚಾಗುತ್ತಿದ್ದಾರೆ.ಹೀಗಾಗಿ ಮಕ್ಕಳನ್ನು ಕರೆದುಕೊಂಡು ದೂರದೂರಿಗೆ ಹೋಗುವಾಗ ನಮ್ಮ ಒಂದು ಕಣ್ಣು ಮಕ್ಕಳ ಕಡೆಗೆ ಇರಬೇಕಾಗುತ್ತದೆ.ಸ್ವಲ್ಪ ಯಾಮಾರಿದ್ರೂ ಏನೆಲ್ಲಾ ಅಪಾಯಗಳಾಗಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.ಈ ಘಟನೆ ನಡೆದಿದ್ದು ಚೆನ್ನೈನಲ್ಲಿ.
ಹೌದು,ತಾಯಿ ಜೊತೆಗಿದ್ದ ಒಂದೂವರೆ ವರ್ಷದ ಮಗುವನ್ನು ಯಾರೋ ಅಪಹರಿಸಿರುವ ಘಟನೆಯೊಂದು ವರದಿಯಾಗಿತ್ತು. ತಾಯಿ ಕೊಟ್ಟ ದೂರಿನಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಕೇವಲ 5 ಗಂಟೆಯಲ್ಲಿ ಪ್ರಕರಣ ಬೇಧಿಸಿ ಮಗುವನ್ನು ವಾಪಾಸ್ ದಂಪತಿಗೊಪ್ಪಿಸಿರುವ ರೋಚಕ ಘಟನೆ ವರದಿಯಾಗಿದೆ.
ಒಡಿಶಾ ಮೂಲದ ನಂದಿನಿ ಕನ್ಹರ್ ತನ್ನ ಒಂದುವೂರೆ ವರ್ಷದ ಮಗ ಆಯುಷ್ ನೊಂದಿಗೆ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದರು. ಇನ್ನೇನು ರೈಲು ಹತ್ತಿ ಊರಿಗೆ ಹೋಗಬೇಕು ಎನ್ನುವ ತವಕದಲ್ಲಿದ್ದ ಅವರು ರೈಲು ಹತ್ತುವಲ್ಲಿಯೇ ತಲ್ಲೀನರಾಗಿದ್ದರು.ಇದೇ ಸಂದರ್ಭವನ್ನು ಕ್ಯಾಚ್ ಮಾಡಿಕೊಂಡು ಯಾರೋ ದಂಪತಿ ಬಂದು ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾರೆ.ರೈಲು ಹತ್ತುವಷ್ಟರಲ್ಲಿ ಮಗುವನ್ನು ಅತ್ತಿತ್ತ ಹುಡುಕಿದ ನಂದಿನಿಗೆ ಮಗು ಕಾಣಿಸಲೇ ಇಲ್ಲ. ಕೊನೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಯ ಪ್ರವೃತ್ತರಾದ ಪೊಲೀಸರು ರೈಲ್ವೇ ನಿಲ್ದಾಣದ ಹಾಗೂ ಆ ಪ್ರದೇಶದಲ್ಲಿನ ಎಲ್ಲಾ ಸಿಸಿಟಿವಿಯನ್ನು ಪರಿಶೀಲಿಸಿದರು.ನಂದಿನಿ ನಿಂತಿರುವ ಬಳಿ ಇಬ್ಬರು ಬಂದು ಮಗುವನ್ನಿಡಿದುಕೊಂಡು ಆಟೋ ಹತ್ತುವ ದೃಶ್ಯ ಸಿಸಿಟಿಟಿಯಲ್ಲಿ ದಾಖಲಾಗಿದೆ.
ಬಳಿಕ ಮಗುವನ್ನಿಡಿದುಕೊಂಡು ಆಟೋ ಹತ್ತಿದ್ದ ಇಬ್ಬರು ವಾಲ್ ಟ್ಯಾಕ್ಸ್ ರಸ್ತೆ ಕಡೆ ಹೋಗುವುದನ್ನು ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದಾರೆ. ಆ ಬಳಿಕ ಪೊಲೀಸರು ಆಟೋ ರಿಕ್ಷಾದ ಜಾಡು ಹಿಡಿದು ಹಿಂಬಾಲಿಸಿದ್ದಾರೆ. ಕುಂದ್ರತ್ತೂರಿನಲ್ಲಿ ಇಳಿಯುವುದನ್ನು ಪೊಲೀಸರು ನೋಡಿದ್ದಾರೆ.
ಕೂಡಲೇ ಸ್ಥಳಕ್ಕೆ ತಲುಪಿದ ಪೊಲೀಸರು ಮಗುವನ್ನು ವಶಪಡೆದಿದ್ದಾರೆ. ಆ ಬಳಿಕ ಜಾರ್ಖಂಡ್ ಮೂಲದ ಪ್ರಭಾಸ್ ಮೊಂಡಲ್ ಮತ್ತು ನಮಿತಾ ಎನ್ನುವ ದಂಪತಿಯನ್ನು ಬಂಧಿಸಿದ್ದಾರೆ.ಸದ್ಯ ಮಗು ವಾಪಾಸ್ ಬಂದ ಖುಷಿಯಲ್ಲಿ ದಂಪತಿ ಇದ್ರೆ ,ಇತ್ತ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.ಮಗು ಅಪಹರಣದಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಅಥವಾ ಇವರು ತಂಡವಾಗಿ ಇದ್ದಾರೆಯೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.