ನ್ಯೂಸ್ ನಾಟೌಟ್: ಶಾರದೋತ್ಸವ ಮೆರವಣಿಗೆಯ ವೇಳೆ ತಂಡಗಳ ನಡುವೆ ಜಗಳ ಸಂಭವಿಸಿ, ಮೂವರು ಯುವಕರು ಚೂರಿ ಇರಿತಕ್ಕೊಳಗಾಗಿ ಗಾಯಗೊಂಡ ಘಟನೆ ಗುರುವಾರ(ಅ.26) ರಾತ್ರಿ 9 ಗಂಟೆ ಸುಮಾರಿಗೆ ಘಟನೆ ಮೆಲ್ಕಾರ್ ನಲ್ಲಿ ನಡೆದಿದೆ.
ಬೋಳಂಗಡಿ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್, ಮೆಲ್ಕಾರ್ ನಿವಾಸಿಗಳಾದ ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ಅವರ ತಂಡ ಈ ಕೃತ್ಯ ಎಸಗಿದೆ ಎಂದು ಗಾಯಾಳುಗಳು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ವೇಳೆ ಎರಡು ತಂಡಗಳ ನಡುವೆ ಸಂಭವಿಸಿದ ಗಲಾಟೆಯ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ಇತ್ತಂಡಗಳ ನಡುವೆ ಹೊಡೆದಾಟ, ಚೂರಿ ಇರಿತ ನಡೆದಿದೆ ಎನ್ನಲಾಗಿದೆ.
ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್ ಮತ್ತು ಶಂಕರ್ ಚೂರಿ ಇರಿತಕ್ಕೊಳಗಾದವರಾಗಿದ್ದು, ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಜೊತೆಯಾಗಿ ಹುಲಿ ವೇಷ ಹಾಕಿ ಶಾರದಾ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಯುವಕರ ತಂಡವು ಯಾವುದೋ ವಿಚಾರಕ್ಕೆ ಇಬ್ಭಾಗವಾಗಿದ್ದು, ಇದೀಗ ಪ್ರತ್ಯೇಕ ಹುಲಿ ವೇಷ ತಂಡಗಳನ್ನು ಕಟ್ಟಿಕೊಂಡಿದೆ. ಬುಧವಾರ ಶಾರದಾ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಈ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿತ್ತು.
ಅದರ ಮುಂದುವರಿದ ಭಾಗವಾಗಿ ನಿನ್ನೆ ಮೆಲ್ಕಾರ್ ಜಂಕ್ಷನ್ ನಲ್ಲಿ ಒಂದು ತಂಡದ ಸದಸ್ಯರು ಬ್ಯಾನರ್ ತೆರವು ಮಾಡುತ್ತಿದ್ದ ವೇಳೆ ಇನ್ನೊಂದು ತಂಡ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ, ಚೂರಿಯಿಂದ ಇರಿದು ಪರಾರಿಯಾಗಿದೆ ಎನ್ನಲಾಗಿದೆ.