ನ್ಯೂಸ್ ನಾಟೌಟ್: ಮುಂಬೈನ ಅನಾಮಿಕ ವ್ಯಕ್ತಿಯೊಂದಿಗೆ ವೆಬ್ ಸೈಟ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೂಡುಬಿದಿರೆ ತಾಲೂಕಿನ ಮಾರ್ಪಾಡಿ ಗ್ರಾಮದ ಆಲಂಗಾರಿನ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇವರು ಮೂವರು ಕೂಡ ಶ್ರೀಲಂಕಾ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ನವೀದ್ (30 ವರ್ಷ ), ಉಮೇಶ್ (40 ವರ್ಷ) ಹಾಗೂ ಪ್ರಸಾದ್ ದೇವಾಡಿಗ (35 ವರ್ಷ) ಎಂದು ಗುರುತಿಸಲಾಗಿದೆ.
16-10-2023 ರಂದು ಮೂಡಬಿದರೆ ತಾಲೂಕು, ಮಾರ್ಪಾಡಿ ಗ್ರಾಮದ ಅಲಂಗಾರು ಎಂಬಲ್ಲಿರುವ ಎಸ್.ಐ ಸ್ಪೋರ್ಟ್ಸ್ ಅಂಗಡಿಯ ಮುಂಭಾಗದಲ್ಲಿ ನವೀದ್ ಎಂಬಾತನು ಪ್ರಸಾದ್ ಮತ್ತು ಉಮೇಶ್ ಎಂಬುವರಿಂದ ಹಣವನ್ನು ಪಡೆದು Comfort Zone 247 ಎಂಬ ಮೋಬೈಲ್ ವೆಬ್ ಸೈಟ್ ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ.
ವಿಚಾರಿಸಿದಾಗ ಶ್ರೀಲಂಕಾ-ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಪಂದ್ಯದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಅದೇ ಪ್ರಕಾರ ಆರೋಪಿ ನವೀದ್ ನ ಬಳಿ ಇರುವ ಮೋಬೈಲ್ ನ ಗೂಗಲ್ ಕ್ರೋಮ್ ನಲ್ಲಿ Comfort Zone 247 ಎಂಬ ವೆಬ್ ಸೈಟ್ ನಲ್ಲಿ ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಗೆ ತೊಡಗಿಸಿಕೊಂಡಿರುವ ಬಗ್ಗೆ ತಿಳಿದು ಬಂದಿದೆ.
ಈ ಮ್ಯಾಚ್ ಗಾಗಿ ಹಣವನ್ನು ಬೆಟ್ಟಿಂಗ್ ಹಾಕುವ ಗಿರಾಕಿಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿರುತ್ತಾನೆ. ಮೂವರನ್ನು ವಶಕ್ಕೆ ಪಡೆದು ಮೂಡಬಿದ್ರೆ ಪೊಲೀಸ್ ಠಾಣೆ ಅ.ಕ್ರ 157/2023 ಕಲಂ: 78(3)(4) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಕಾನೂನು ಕ್ರಮ ಜರುಗಿಸಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಂತೆ, DCP ಸಿದ್ದಾರ್ಥ ಗೊಯಲ್ IPS (ಕಾ&ಸು), ದಿನೇಶ್ ಕುಮಾರ್ DCP (ಅ & ಸಂ) ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ನಾಯ್ಕ್ ರವರ ನಿರ್ದೇಶನದಂತೆ, ಈ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ, ಸಿಬ್ಬಂದಿಗಳಾದ ಚಂದ್ರಹಾಸ್ ರೈ, ಮೊಹಮ್ಮದ್ ಹುಸೇನ್, ಅಖೀಲ್ ಅಹ್ಮದ್ ಹಾಗೂ ಅವರ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.