ದಿಲ್ಲಿ ಪೊಲೀಸರ ವಿಚಾರಣೆಯಲ್ಲಿ ಕರ್ನಾಟಕದ ನಂಟಿನ ಬಗ್ಗೆ ಬಾಯ್ಬಿಟ್ಟ ಉಗ್ರರು ಹೇಳಿದ್ದೇನು?
ನ್ಯೂಸ್ ನಾಟೌಟ್: ಮೋಸ್ಟ್ ವಾಂಟೆಡ್ ಮೂವರು ಉಗ್ರರನ್ನು ದಿಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಹಲವು ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಉಗ್ರರು ದಕ್ಷಿಣ ಭಾರತದಲ್ಲಿ ಐಸಿಸ್ ಉಗ್ರರ ಬೇಸ್ ಕ್ಯಾಂಪ್ ಸ್ಥಾಪಿಸಲು ಪ್ಲಾನ್ ಮಾಡಿದ್ದರು. ಇಷ್ಟೇ ಅಲ್ಲ ಗೋವಾ ಮೂಲಕ ಕರ್ನಾಟಕದ ಉಡುಪಿ, ಕೇರಳದ ಕಾಸರಗೋಡು ಕಣ್ಣೂರಿಗೆ ಭೇಟಿ ನೀಡಿದ ಸ್ಫೋಟಕ ಮಾಹಿತಿ ಬಯಲಾಗಿದೆ.
ದೆಹಲಿ ವಿಶೇಷ ಪೊಲೀಸ್ ದಳ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಬಂಧಿಸಲಾಗಿದೆ.ಈ ಮೂವರ ಪೈಕಿ ಶಹನವಾಜ್, ಮೊಹಮ್ಮದ್ ರಿಜ್ವಾನ್ ಕರ್ನಾಟಕ ಹಾಗೂ ಕೇರಳಕ್ಕೆ ಭೇಟಿ ನೀಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಪುಣೆಯಿಂದ ಗೋವಾಗೆ ತೆರಳಿ, ಅಲ್ಲಿಂದ ಕರ್ನಾಟಕದ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಕೇರಳದ ಕಾಸರಗೋಡಿಗೆ ತೆರಳಿ ಕಣ್ಣೂರು ಬಳಿಯ ಕಾಡಿನಲ್ಲಿ ಪರಿಶೀಲನೆ ನಡೆಸಿದ್ದಾರೆ. ಇವರಿಗೆ ಕೇರಳದಲ್ಲಿ ಕೆಲ ಶಂಕತಿರು ನೆರವು ನೀಡಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇವರೆಲ್ಲ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸಿ, ಬಳಿಕ ದೇಶದಲ್ಲಿ ಐಸಿಸ್ ಉಗ್ರರ ನೆಲೆ ವಿಸ್ತರಿಸಿ ಭಯೋತ್ಪಾದಕ ದಾಳಿ ನಡೆಸಲು ಹಾಗೂ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದರು. ಗೋವಾ, ಕರ್ನಾಟಕ, ಕೇರಳ ಹಾಗೂ ಆಂಧ್ರಪ್ರದೇಶ ಕಾಡಿನಲ್ಲಿ ಅವಿತುಕೊಂಡು ಕಾರ್ಯಾಚರಣೆ ಆರಂಭಿಸಲು ಪ್ಲಾನ್ ರೆಡಿಯಾಗಿತ್ತು. ಬಂಧಿತ ಉಗ್ರ ಶಹನವಾಜ್ ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಿದ್ದ. ಗುಜರಾತ್ನ ಗಾಂಧಿನಗರ ಹಾಗೂ ಮುಂಬೈ ಕೆಲ ರಾಜಕೀಯ ನಾಯಕರು ಈತನ ಹಿಟ್ಲಿಸ್ಟ್ನಲ್ಲಿದ್ದಾರೆ ಎನ್ನಲಾಗಿದೆ.
ಇನ್ನು ದೆಹಲಿ, ರಾಜಸ್ಥಾನ ಹಾಗೂ ಉತ್ತರಖಂಡದಲ್ಲಿ ಪರೀಕ್ಷಾರ್ಥವಾಗಿ ಸ್ಪೋಟ ನಡೆಸಲಾಗಿತ್ತು. ಈ ಮೂವರಿಗೆ ಪಾಕಿಸ್ತಾನದ ಐಸಿಸ್ ಎಜೆಂಟ್ ನೆರವು ನೀಡಿದ್ದ. ದಕ್ಷಿಣ ಭಾರತದಲ್ಲಿ ಬೇಸ್ ಕ್ಯಾಂಪ್ ನಿರ್ಮಿಸಿ ಉಗ್ರರ ಮೂಲಕ ಕಾರ್ಯಾಚರಣೆಗೆ ಎಲ್ಲಾ ಪ್ಲಾನ್ ಸಿದ್ದವಾಗಿತ್ತು. ಇದರ ಕಾರ್ಯ ನಿರ್ವಹಣೆಗಾಗಿ ಆಫ್ಘಾನಿಸ್ತಾನಕ್ಕೆ ಪ್ರಯಾಣ ಬೆಳೆಸಲು ಈ ಮೂವರು ಸಜ್ಜಾಗಿದ್ದರು ಎನ್ನಲಾಗಿದೆ.