ನ್ಯೂಸ್ ನಾಟೌಟ್ : ಅಯೋಧ್ಯೆಯ ರಾಮ ಜನ್ಮಭೂಮಿ ಆವರಣದ ಹೈ-ಸೆಕ್ಯುರಿಟಿ ವಲಯದ ಕೊಠಡಿಯೊಂದರಲ್ಲಿ ಹನುಮಾನ್ಗರ್ಹಿ ದೇವಸ್ಥಾನದ ಅರ್ಚಕ ಶವವಾಗಿ ಪತ್ತೆಯಾಗಿದ್ದಾರೆ.
ಇಂದು (ಅ.19,ಗುರುವಾರ) ಬೆಳಗ್ಗೆ ರಕ್ತದ ಮಡುವಿನಲ್ಲಿ ಶವವಾಗಿ ಅರ್ಚಕ ರಾಮ್ ಸಹ್ರೇ ದಾಸ್ (44) ಅವರು ಕಂಡುಬಂದಿದ್ದಾರೆ. ಬೆಳಗ್ಗೆ ದೇಗುಲದ ಪ್ರಾರ್ಥನೆಗೆ ಬರದೆ ಇದ್ದಾಗ ಘಟನೆ ಬೆಳಕಿಗೆ ಬಂದಿದೆ.
ಇವರ ಕೋಣೆಗೆ ಇವರ ಇಬ್ಬರು ಶಿಷ್ಯರು ಬಿಟ್ಟರೆ ಬೇರೆಯವರಿಗೆ ಪ್ರವೇಶವಿರಲಿಲ್ಲ. ಹೀಗಾಗಿ ಇವರಿಬ್ಬರೇ ಶಂಕಿತ ಆರೋಪಿಗಳಾಗಿದ್ದಾರೆ. ಓರ್ವ ಶಿಷ್ಯನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಬ್ಬ ಶಿಷ್ಯ ಕಾಣೆಯಾಗಿದ್ದಾನೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕರಣ್ ನಯ್ಯರ್ ತಿಳಿಸಿದ್ದಾರೆ.
ಅರ್ಚಕ ರಾಮ್ ಸಹ್ರೇ ದಾಸ್ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಲಾಗಿದೆ. ನಿನ್ನೆ ರಾತ್ರಿ ರಾಮ್ ಸಹ್ರೇ ದಾಸ್ ಅವರಿಗೂ ಹಾಗೂ ಅವರ ಶಿಷ್ಯರಿಗೂ ಜಗಳ ಆಗಿತ್ತು ಎಂದು ತಿಳಿದುಬಂದಿದೆ. ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಲಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.