ನ್ಯೂಸ್ ನಾಟೌಟ್ : ಮಕ್ಕಳಿಬ್ಬರು ಗಂಟೆಗಟ್ಟಲೆ ಬಸ್ ಸ್ಟ್ಯಾಂಡ್ನಲ್ಲಿ ಕುಳಿತುಕೊಂಡು ಸ್ಥಳೀಯರಿಗೆ ಅನುಮಾನ ಮೂಡಿಸುವಂತೆ ಮಾಡಿರುವ ಘಟನೆ ಸುಳ್ಯದ ಅಜ್ಜಾವರದ ಅಡ್ಪಂಗಾಯ ಬಸ್ಸ್ಟ್ಯಾಂಡ್ನಲ್ಲಿ ಸಂಭವಿಸಿದೆ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿರುವ ಪ್ರಸಂಗವೂ ನಡೆಯಿತು.
ಸುಮಾರು 10 ವರ್ಷ ಪ್ರಾಯದ ಇಬ್ಬರು ಮಕ್ಕಳು ಗಂಟೆಗಟ್ಟಲೆ ಬಸ್ಸ್ಟ್ಯಾಂಡ್ನಲ್ಲಿಯೇ ಕುಳಿತುಕೊಂಡಿದ್ದು,ಸ್ಥಳೀಯರ ಅನುಮಾನಗಳಿಗೆ ಕಾರಣವಾಯಿತು.ಈ ಬಗ್ಗೆ ಮಕ್ಕಳನ್ನು ಸ್ಥಳೀಯರು ಪ್ರಶ್ನಿಸಿದರು ಎನ್ನಲಾಗಿದೆ.ಈ ವೇಳೆ ಉತ್ತರಿಸಿದ ಮಕ್ಕಳು ” ನಮ್ಮ ಮನೆ ಪುತ್ತೂರು ಸಮೀಪದ ಈಶ್ವರಮಂಗಲದಲ್ಲಿ.ನಮ್ಮ ತಂದೆ-ತಾಯಿ ಮಧ್ಯೆ ಜಗಳವಾಗಿತ್ತು.ಹಾಗೆ ಬೇಜಾರಾಗಿ ನಾವು ಈ(ಅಡ್ಪಂಗಾಯ) ಬಸ್ಸ್ಟ್ಯಾಂಡ್ಗೆ ನಡೆದುಕೊಂಡೇ ಬಂದಿದ್ದೇವೆ” ಎಂದಿದ್ದಾರೆ.
ಗಾಬರಿಯಾದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೆಲ ಹೊತ್ತಲ್ಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಕ್ಕಳನ್ನು ಪ್ರಶ್ನಿಸಿದ್ದಾರೆ.ಅಸಲಿಗೆ ಆ ಮಕ್ಕಳು ಸುಳ್ಯದ ಅಜ್ಜಾವರ ಗ್ರಾಮದ ಅಡ್ಪಂಗಾಯ ಡೆಂಜಿಗುರಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ಇವರ ಮೂಲ ಮನೆ ಈಶ್ವರಮಂಗಲದಲ್ಲಿ ಎಂದು ತಿಳಿದು ಬಂದಿದೆ.ಆದರೆ ಮಕ್ಕಳು ಸುಳ್ಯದ ಅಜ್ಜಾವರದ ಬಾಡಿಗೆ ಮನೆಯಲ್ಲಿರುವ ವಿಷಯವನ್ನು ಹೇಳದೇ ಮೂಲ ಮನೆ ಈಶ್ವರಮಂಗಲ ಎಂದು ಹೇಳಿಕೊಂಡಿರುವುದರಿಂದ ಅಲ್ಲಿಂದ ಇಲ್ಲಿಗೆ ನಡೆದುಕೊಂಡು ಬಂದರೇ ಎಂದು ಸ್ಥಳೀಯರು ಗಾಬರಿಗೊಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಇಬ್ಬರು ಮಕ್ಕಳ ಪೋಷಕರನ್ನು ಪೊಲೀಸರು ಸ್ಥಳಕ್ಕೆ ಕರೆಯಿಸಿ ಮಕ್ಕಳಿಗೆ ಹಾಗೂ ಹೆತ್ತವರಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.