ನ್ಯೂಸ್ ನಾಟೌಟ್: ಪಿಎಸ್ಐ ನೇಮಕಾತಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ಗೆ ಸೋಮವಾರ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಳೆದ ಬಿಜೆಪಿ ಸರ್ಕಾರದಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿಯಲ್ಲಿ ಅಕ್ರಮ ಎಸಗಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಅಮೃತ್ ಪೌಲ್ ಮಾರ್ಚ್ನಲ್ಲಿ ಜೈಲು ಸೇರಿದ್ದರು. ಅವರ ಮೇಲೆ ಆರೋಪ ಕೇಳಿ ಬಂದ ತಕ್ಷಣ ಆಗಿನ ಸರ್ಕಾರ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಿತ್ತು. ನೇಮಕಾತಿ ಅಕ್ರಮದ ಸಮಯದಲ್ಲಿ ಅವರು ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದರು.
ಈ ಕುರಿತಂತೆ ಕಾಯ್ದಿರಿಸಿದ ಆದೇಶವನ್ನು ಕಲಬುರಗಿ ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿ ಪಿ.ಎಂ. ನವಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ.
ತನಿಖೆಗೆ ಸಹಕರಿಸಬೇಕು, ಅನುಮತಿ ಇಲ್ಲದೇ ವಿದೇಶಕ್ಕೆ ಹೋಗುವಂತಿಲ್ಲ ಇತ್ಯಾದಿ ಷರತ್ತುಗಳನ್ನು ಹಾಕಲಾಗಿದೆ.
ಹಗರಣದಲ್ಲಿ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಸೇರಿದಂತೆ ಹಲವು ನೌಕರರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಅವರೆಲ್ಲರ ವಿಚಾರಣೆಯಿಂದ ಅಮೃತ್ ಪೌಲ್ ಸಹ ಅಕ್ರಮದಲ್ಲಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿತ್ತು.
ಎಡಿಜಿಪಿಯಾಗಿ ಜೈಲು ಸೇರಿದ ಕರ್ನಾಟಕದ ಮೊದಲ ಐಪಿಎಸ್ ಅಧಿಕಾರಿಯಾಗಿ ಅಮೃತ್ ಪೌಲ್ ಕುಖ್ಯಾತಿ ಪಡೆದಿದ್ದರು. ಕಳೆದ ಆರು ತಿಂಗಳಿಗೂ ಹೆಚ್ಚು ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.