ನ್ಯೂಸ್ ನಾಟೌಟ್: ತ್ಯಾಗ- ಬಲಿದಾನದಲ್ಲಿ ಭಾರತೀಯ ಸೇನೆಯ ಜೊತೆ ಶ್ವಾನಗಳದ್ದೂ ದೊಡ್ಡ ಪಾತ್ರವಿದೆ. ಸೇನೆಯ ಶ್ವಾನಪಡೆಯ ಆರು ವರ್ಷದ ಲ್ಯಾಬ್ರಡಾರ್, ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದ ಎನ್ಕೌಂಟರ್ ವೇಳೆ ತನ್ನ ಸೇನಾ ಜವಾನರ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದೆ.
ಸೇನಾ ಶ್ವಾನದಳದ ಆರು ವರ್ಷದ ಹೆಣ್ಣು ನಾಯಿ ಕೆಂಟ್, ಭಯೋತ್ಪಾದಕರನ್ನು ಓಡಿಸುವ ಕಾರ್ಯಾಚರಣೆಯಲ್ಲಿ ಸೈನಿಕರ ತಂಡದ ನೇತೃತ್ವ ವಹಿಸಿತ್ತು.
ಈ ಕಾರ್ಯಾಚರಣೆ ವೇಳೆ ತಂಡದ ಮೇಲೆ ಭಾರಿ ಗುಂಡಿನ ದಾಳಿ ನಡೆಯಿತು. ತನ್ನನ್ನು ನಿರ್ವಹಿಸುತ್ತಿದ್ದ ಒಡೆಯನ ರಕ್ಷಣೆಗೆ ಮುಂದಾದ ಕೆಂಟ್, ಗುಂಡೇಟಿನಿಂದಸ್ಥಳದಲ್ಲೇ ಪ್ರಾಣ ಬಿಟ್ಟಿತು ಎಂದು ಭಾರತೀಯ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿಕೆ ನೀಡಿದ್ದಾರೆ.
‘ಆಪರೇಷನ್ ಸುಜಲಿಗಂಗಾ’ ಕಾರ್ಯಾಚರಣೆಯಲ್ಲಿ ಕೆಂಟ್ ಮುಂಚೂಣಿಯಲ್ಲಿತ್ತು ಎಂದು ತಿಳಿಸಲಾಗಿದೆ. ರಾಜೌರಿ ಜಿಲ್ಲೆಯ ನರ್ಲಹ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹಾಗೂ ಒಬ್ಬ ಉಗ್ರಗಾಮಿ ಕೊನೆಯುಸಿರೆಳೆದಿರುವುದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಕೇಶ್ ಸಿಂಗ್ ತಿಳಿಸಿದ್ದಾರೆ. ವಿಶೇಷ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.