ನ್ಯೂಸ್ ನಾಟೌಟ್ : ‘ಡ್ರಗ್ ಅಡಿಕ್ಟ್ ಯುವತಿಯ ಗೂಂಡಾ ವರ್ತನೆ’ ಅನ್ನುವ ಹೆಸರಿನಲ್ಲಿ ಈ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆದರೆ ಆಕೆ ಡ್ರಗ್ ಅಡಿಕ್ಟ್ ಅಲ್ಲ ಅನ್ನೋದನ್ನು ಸ್ವತಃ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟ ಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಯುವತಿಯೊಬ್ಬಳನ್ನ ನಾಲ್ಕೈದು ಮಹಿಳಾ ಪೊಲೀಸ್ ಸಿಬ್ಬಂದಿ ನಿಯಂತ್ರಿಸುತ್ತಿರುವ ಈ ವಿಡಿಯೋದಲ್ಲಿ ಆಕೆ ಪೊಲೀಸ್ ಸಿಬ್ಬಂದಿಗೆ ತುಳಿಯಲು ಯತ್ನಿಸುತ್ತಿರುವ ದೃಶ್ಯಗಳಿವೆ. ಈ ವೇಳೆ ಯುವತಿಯನ್ನು ನಿಯಂತ್ರಿಸಲು ಕೈ ಕೋಳ ತೊಡಿಸುವ ಪೊಲೀಸರು, ಆಕೆಗೂ ಎರಡೇಟು ಬಿಗಿದಿದ್ದಾರೆ. ಸದ್ಯ ಯುವತಿ ಡ್ರಗ್ ಅಡಿಕ್ಟ್ ಎಂದು ಕದ್ರಿ ಠಾಣೆಯಲ್ಲಿ ನಡೆದ ಘಟನೆಯ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಹರಿ ಬಿಡಲಾಗಿದೆ. ಆದರೆ ಈ ವೈರಲ್ ವಿಡಿಯೋ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.
‘ಡ್ರಗ್ ಅಡಿಕ್ಟ್’ ಹೆಸರಲ್ಲಿ ಮಾನಸಿಕ ಸಮಸ್ಯೆಯ ಯುವತಿಯೊಬ್ಬಳ ವಿಡಿಯೋ ವೈರಲ್ ಮಾಡಲಾಗಿದೆ. ಮಂಗಳೂರಿನ ಕದ್ರಿ ಠಾಣೆಯಲ್ಲಿ ಯುವತಿ ಪೊಲೀಸರ ಮೇಲೆಯೇ ದಾಳಿ ನಡೆಸುವ ವಿಡಿಯೋ ಇದಾಗಿದ್ದು, ಸೆ.1ರಂದು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ಎನ್ನಲಾಗಿದೆ.
ಸೆ.1 ರ ಬೆಳಿಗ್ಗೆ 06.50ಕ್ಕೆ ಪಂಪವೆಲ್ ಗಣೇಶ್ ಮೆಡಿಕಲ್ ನಲ್ಲಿ ಈ ಯುವತಿ ಸಿಕ್ಕಿದ್ದಾಳೆ. ಅಸಾಮಾನ್ಯವಾಗಿ ಹಾಗೂ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಳು. ಇದನ್ನು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ಗಮನಿಸಿ ಮಾದಕ ದ್ರವ್ಯ ಸೇವನೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಅವರ ಮೇಲೆಯೇ ದಾಳಿಗೆ ಯತ್ನಿಸಿದ್ದಾಳೆ.
ಬಳಿಕ ಕದ್ರಿ ಪೊಲಿಸರ ಸಹಾಯದಿಂದ ಠಾಣೆಗೆ ಕರೆ ತಂದ ಅಬಕಾರಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ವಿಚಿತ್ರ ವರ್ತನೆ ತೋರಿದ್ದಾಳೆ. ಬಳಿಕ ಮಹಿಳಾ ಸಿಬ್ಬಂದಿ ಬಲದೊಂದಿಗೆ ಯುವತಿ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಆದರೆ ವೈದ್ಯಕೀಯ ತಪಾಸಣೆಯಲ್ಲಿ ಮಾದಕ ದ್ರವ್ಯ ಪರೀಕ್ಷೆ ನೆಗೆಟಿವ್ ಬಂದಿದೆ. ನಂತರ ಅಕೆಯನ್ನು ಆಕೆಯ ಪೋಷಕರ ವಶಕ್ಕೆ ವಹಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮಾನಸಿಕ ಸಮಸ್ಯೆಯ ಯುವತಿಯ ವಿಡಿಯೋ ವೈರಲ್ ಮಾಡಿದವರ ಬಗ್ಗೆಯೂ ಮಂಗಳೂರು ಪೊಲೀಸರ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.