ನ್ಯೂಸ್ ನಾಟೌಟ್ : ಬೈಂದೂರು ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿಗೆ ಚೈತ್ರಾ ಕುಂದಾಪುರ ೫ ಕೋಟಿ ರೂಪಾಯಿ ವಂಚಿಸಿದ್ದಾರೆ ಎಂಬ ಕೇಸ್ ನಲ್ಲಿ ಬಂಧನವಾದ ಬೆನ್ನಲ್ಲೇ ಸ್ಟೋಟಕ ಹೇಳಿಕೆಗಳು ಹೊರಬೀಳುತ್ತಿವೆ.
ಗಗನ್ ಕಡೂರು, ಮೋಹನ್ ಕುಮಾರ್ ಅಲಿಯಾಸ್ ರಮೇಶ್ ಮತ್ತು ಗ್ಯಾಂಗ್ ಜತೆ ಸೇರಿಕೊಂಡು ಉದ್ಯಮಿ ಬಳಿಯಿಂದ ಬರೋಬ್ಬರಿ ೫ ಕೋಟಿ ವಂಚಿಸಿದ್ದಾರೆ ಎನ್ನಲಾಗಿದ್ದು. ಪ್ರಕರಣದ ಬಗ್ಗೆ ಇಂಚಿಂಚೂ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಅಲರ್ಟ್ ಆಗಿ ಎಲ್ಲರನ್ನೂ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಇದರ ಮಧ್ಯೆ ಚೈತ್ರಾ ಕುಂದಾಪುರ ಸ್ವಾಮೀಜಿ ಬಂಧನವಾಗಲಿ ಆಗ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಕೆಳಗಡೆ ಇಳಿಯುತ್ತಿದ್ದಂತೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಾತನಾಡಿದ ಚೈತ್ರಾ, ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಗೋವಿಂದ ಪೂಜಾರಿಯ ೩೫ ಕೋಟಿಯ ಇಂದಿರಾ ಕ್ಯಾಂಟೀನ್ ಬಿಲ್ಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದು ಈಗ ಭಾರಿ ಸಂಚಲನ ಮೂಡಿಸಿದೆ.
ಚೈತ್ರಾಳ ಈ ಹೇಳಿಕೆ ಬಳಿಕ ಸ್ವಾಮೀಜಿ ನೇತೃತ್ವದಲ್ಲಿ ನಡೆದಿರುವುದಾದರೂ ಏನು? ಮೂವರ ನಡುವೆ ನಡೆದ ಮಾತುಕತೆ ಆದರು ಏನು? ಈ ಪ್ರಕರಣದಲ್ಲಿ ದೊಡ್ಡವರು ಸಹ ಶಾಮೀಲು ಆಗಿದ್ದಾರಾ? ಸ್ವಾಮೀಜಿ ಬಂಧನದ ಬಳಿಕ ಎಲ್ಲವೂ ಗೊತ್ತಾಗಲಿದೆಯಾ? ಎಂಬ ಪ್ರಶ್ನೆ ಉದ್ಭವಿಸಿವೆ.
ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲುಸ್ವಾಮಿ ಮಠದ ಅಭಿನವ ಶ್ರೀ ಹಾಲುಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದಲ್ಲಿ ಇದ್ದು, ಎ3 ಆರೋಪಿಯಾಗಿದ್ದಾರೆ. ಆದ್ರೆ, ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಸ್ವಾಮೀಜಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.