ನ್ಯೂಸ್ ನಾಟೌಟ್ : ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಸರ್ಕಾರದ ನಡೆಯನ್ನು ವಿರೋಧಿಸಿ ಬೆಂಗಳೂರು ಬಂದ್ ಪ್ರತಿಭಟನೆಯ ವೇಳೆ ಭದ್ರತೆಗೆ ನಿಯೋಜನೆ ಮಾಡಿದ ಪೊಲೀಸರಿಗೆ ಹೋಟೆಲ್ನಿಂದ ಸರಬರಾಜು ಮಾಡಲಾಗಿದ್ದ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದೆ.
ಕನ್ನಡ ಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳಿಂದ ಬೆಂಗಳೂರು ಬಂದ್ ಮಾಡಲಾಗುತ್ತಿದೆ. ಇದಕ್ಕೆ ಸರ್ಕಾರದ ಅನುಮತಿ ಇಲ್ಲದಿದ್ದರೂ ಬಂದ್ ಮಾಡಲಾಗುತ್ತಿದ್ದು, ಬೆಂಗಳೂರು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಪೊಲೀಸರನ್ನೂ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಆದರೆ, ಭದ್ರತೆಗೆ ಬಂದ ಪೊಲೀಸರಿಗೆ ನೀಡಿದ ಊಟದಲ್ಲಿ ಇಲಿ ಪತ್ತೆಯಾಗಿದೆ.
ಪೊಲೀಸ್ ಆಯುಕ್ತರ ವಿರುದ್ಧ ಪೊಲೀಸ್ ಸಿಬ್ಬಂದಿ ಕಿಡಿಕಾರಿದ್ದು, ಕಾವೇರಿ ಬಂದ್ಗೆ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರ ಊಟದಲ್ಲಿ ಇಲಿ ಪತ್ತೆಯಾಗಿದ್ದರೂ ಅದನ್ನು ಯಾರ ಬಳಿಯೂ ಹೇಳಿಕೊಳ್ಳದಂತೆ ತಾಕೀತು ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ಪೊಲೀಸ್ ಇಲಾಖೆಯಿಂದ ಸರಬರಾಜು ಮಾಡಿದ ಊಟವನ್ನು ತೆರೆದಾಗ ಅದರಲ್ಲಿ ಇಲಿ ಕಂಡು ಪೊಲೀಸ್ ಸಿಬ್ಬಂದಿ ಅಚ್ಚರಿ ಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸರಿಗೆ ಸರಬರಾಜು ಮಾಡಿದ ಬೆಳಗ್ಗಿನ ತಿಂಡಿ ಪ್ಯಾಕೆಟ್ ತೆರೆಯುತ್ತಿದ್ದಂತೆ ಸತ್ತಿರುವ ಇಲಿ ಕಂಡುಬಂದಿದೆ.
ಇನ್ನು ಉಳಿದವರಿಗೆ ನೀಡಿರುವ ಆಹಾರದ ಗುಣಮಟ್ಟದ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.