ನ್ಯೂಸ್ ನಾಟೌಟ್: ಸಾಹಿತಿಗಳಿಗೆ ಜೀವ ಬೆದರಿಕೆ ಒಡ್ಡಿ ಪತ್ರ ಬರೆದಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು (CCB Police) ವಶಪಡಿಸಿಕೊಂಡಿದ್ದು, ಆರೋಪಿ ಹಿಂದುತ್ವ ಪರ ಸಂಘಟನೆಯ ಕಾರ್ಯಕರ್ತನಾಗಿದ್ದು, ಈತ ದಾವಣಗೆರೆ (Davanagere) ಮೂಲದವನಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳಿಂದ ಸಾಹಿತಿಗಳಾದ ಕುಂ. ವೀರಭಧ್ರಪ್ಪ, ಬಿ ಟಿ ಲಲಿತಾ ನಾಯಕ್, ಕೆ ಮರುಳಸಿದ್ದಪ್ಪ, ಡಾ .ಜಿ ರಾಮಕೃಷ್ಣ, ಪ್ರೊ. ಎಸ್ ಜಿ ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ವಿಮಲಾ, ಶ್ರೀಪಾದ ಭಟ್, ಸುರೇಂದ್ರ ರಾವ್ ಸೇರಿದಂತೆ ಕೆಲ ಸಾಹಿತಿಗಳಿಗೆ ಅನಾಮಧೇಯವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿದ್ದವು. ‘ಡಿಜೆ ಹಳ್ಳಿ – ಕೆಜಿ ಹಳ್ಳಿಯಂಥಹ ಗಲಭೆಗಳ ಬಗ್ಗೆ ಮಾತನಾಡದ ನೀವು ಹಿಂದೂ ಧರ್ಮದ ಕುರಿತು ಅವಹೇಳನ ಮಾಡುತ್ತೀರಿ ಎಂದು ಪತ್ರದಲ್ಲಿ ಉಲ್ಲೇಖಿಸಿ ಬೆದರಿಕೆ ಹಾಕಲಾಗಿತ್ತು.
ಸಾಹಿತಿಗಳಿಗೆ ಬಂದಿದ್ದ ಬೆದರಿಕೆ ಪತ್ರಗಳ ಎಲ್ಲಾ ಬರವಣಿಗೆ ಶೈಲಿ ಒಂದೇ ಆಗಿತ್ತು. ಈ ಪತ್ರಗಳನ್ನು ದಾವಣಗೆರೆಯಿಂದ ಪೋಸ್ಟ್ ಮಾಡಲಾಗಿದ್ದ ಜಾಡು ಹಿಡಿದು ಹೊರಟ ಸಿಸಿಬಿ ಪೊಲೀಸರು ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ ಎಂಬಾತನನ್ನು ಬಂಧಿಸಿದ್ದಾರೆ. ಎಸಿಪಿ ನವೀನ್ ಕುಲಕರ್ಣಿ ನೇತೃತ್ವದ ತಂಡ ಈ ಪ್ರಕರಣದ ಬೆನ್ನಟ್ಟಿ ದಾವಣಗೆರೆಯ ಹಿಂದೂ ಸಂಘಟನೆಯೊಂದರ ಕಾರ್ಯಕರ್ತನಾಗಿರುವ ಶಿವಾಜಿ ರಾವ್ ಜಾಧವ್ ಎಂಬಾತನನ್ನು ಬಲೆಗೆ ಕೆಡವಿದ್ದಾರೆ.
ಸದ್ಯ ಆರೋಪಿಯನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪತ್ರದ ಹಿಂದೆ ಶಿವಾಜಿ ರಾವ್ ಒಬ್ಬನೇ ಇದ್ದಾನಾ ಅಥವಾ ಆತನ ಹಿಂದೆ ಬೇರೆ ಯಾರಾದರೂ ಇದ್ದಾರಾ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಬೆಂಗಳೂರು ಸೇರಿದಂತೆ ರಾಜ್ಯದ ಏಳು ಕಡೆಗಳಲ್ಲಿ ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದವು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಸಾಹಿತಿಗಳ ನಿಯೋಗ ಇತ್ತೀಚೆಗೆ ಗೃಹ ಸಚಿವರಿಗೆ ಮನವಿ ಸಲ್ಲಿಸಿತ್ತು. ಅದರಂತೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.