ನ್ಯೂಸ್ ನಾಟೌಟ್ : ಭಾರತ ಬಿಟ್ಟು ತೊಲಗಿ ಚಳವಳಿ (Quit India moment) ಸ್ಮರಣಾರ್ಥ ಮುಂಬೈನ ಕ್ರಾಂತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಮಹಾತ್ಮಾ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿಯನ್ನು ಸಾಂತಾಕ್ರೂಸ್ ಪೊಲೀಸರು ಬುಧವಾರ ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ತುಷಾರ್ ಗಾಂಧಿ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಭಾರತ ಬಿಟ್ಟು ತೊಲಗಿ ಚಳವಳಿ ಸ್ಮರಣಾರ್ಥ ಆಗಸ್ಟ್ 9ರಂದು (ಇಂದು) ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟ್ಟಿದ್ದ ನನ್ನನ್ನು, ಸ್ವತಂತ್ರ ಭಾರತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೊಲೀಸರು ಬಂಧಿಸಿದ್ದಾರೆ. ಐತಿಹಾಸಿಕ ದಿನದಂದು ನನ್ನ ಮುತ್ತಜ್ಜ–ಮುತ್ತಜ್ಜಿ, ಬಾಪು ಹಾಗೂ ಬಾ (ಮಹಾತ್ಮಾ ಗಾಂಧಿ ಮತ್ತು ಕಸ್ತೂರ ಬಾ) ಅವರೂ ಬ್ರಿಟೀಷರಿಂದ ಬಂಧನಕ್ಕೊಳಗಾಗಿದ್ದರು ಎಂಬ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ಹೇಳಿದ್ದಾರೆ.
‘ಠಾಣೆಯಿಂದ ತೆರಳಲು ಅನುಮತಿ ದೊರತ ತಕ್ಷಣವೇ ಕಾರ್ಯಕ್ರಮಕ್ಕೆ ತೆರಳುತ್ತೇನೆ. ಖಂಡಿತವಾಗಿಯೂ ಭಾರತ ಬಿಟ್ಟು ತೊಲಗಿ ಚಳವಳಿ ದಿನವನ್ನು ಮತ್ತು ಹುತಾತ್ಮರನ್ನು ಸ್ಮರಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಈ ಭ್ರಷ್ಟ ಸರ್ಕಾರ ನಮ್ಮ ಶಾಂತಿ ಮತ್ತು ಅಹಿಂಸೆಗೆ ಬೆದರುತ್ತಿರುವುದೇಕೆ?’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತುಷಾರ್ ಗಾಂಧಿ ಅವರ ಬಂಧನಕ್ಕೆ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎನ್ನಲಾಗಿದೆ.