ನ್ಯೂಸ್ ನಾಟೌಟ್ : ಇಂದು ದೇಶಾದ್ಯಂತ ಸ್ವಾತಂತ್ರ್ಯ ದಿನದ (Independence day) ಸಂಭ್ರಮ ಮನೆ ಮಾಡಿದ್ದು, 76ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.ಹೀಗೆ ಮಧ್ಯಪ್ರದೇಶದ ರೈಸನ್ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಭಾಷಣದ ವೇಳೆ ಆರೋಗ್ಯ ಸಚಿವ ಪ್ರಭುರಾಮ್ ಚೌಧರಿ (Prabhuram Chaudhary) ಮೂರ್ಛೆ ಹೋಗಿ ಕುಸಿದು ಬಿದ್ದ ಘಟನೆ ವರದಿಯಾಗಿದೆ.
ಕೂಡಲೇ ಸಚಿವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಅಲ್ಲಿಂದ ಭೋಪಾಲ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ಈ ವೇಳೆಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ ಬಳಿಕ ಹೃದಯಾಘಾತವಾಗಿರುವುದನ್ನು ಖಚಿತಪಡಿಸಿದ್ದಾರೆ.
ಈ ಸಂಬಂಧ ರೈಸನ್ ಎಸ್ಪಿ ವಿಕಾಸ್ ಸೆಹ್ವಾಲ್ ಪ್ರತಿಕ್ರಿಯಿಸಿ, ಪಥಸಂಚಲನದ ವೇಳೆ ಸಚಿವರು ಸುಮಾರು ಒಂದೂವರೆ ಗಂಟೆಗಳ ಕಾಲ ನಿಂತುಕೊಂಡೇ ಇದ್ದರು. ಹೀಗಾಗಿ ಸ್ವಲ್ಪ ಆಯಾಸಗೊಂಡಿದ್ದು, ಆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಕುಸಿದು ಬಿದ್ದರು ಎಂದು ಹೇಳಿದ್ದಾರೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.
ಅಲ್ಲಿ ವೈದ್ಯರು ಪರೀಕ್ಷೆ ನಡೆಸಿದಾಗ ಬಿಪಿ (BP) ಜಾಸ್ತಿಯಾಗಿದೆ ಹಾಗೂ ಶುಗರ್ ಲೆವೆಲ್ (Sugar Level) ಕಡಿಮೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. ನಂತರ ಅಲ್ಲಿ ಟ್ರೀಟ್ಮೆಂಟ್ ಕೊಡಿಸಿದ ಬಳಿಕ ಅವರನ್ನು ಭೋಪಾಲ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸಚಿವರು ಸದ್ಯ ಭೋಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.