ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಬೈಕ್ ಕಳ್ಳರ ಹಾವಳಿಗೆ ತಡೆಯೊಡ್ಡಲು ಸುಳ್ಯ ಪೊಲೀಸರು ಖಡಕ್ ನಿರ್ಧಾರ ತೆಗೆದುಕೊಂಡಿದ್ದಾರೆ. ತಡರಾತ್ರಿ ಹೊಂಚು ಹಾಕಿ ಬಸ್ ಸ್ಟ್ಯಾಂಡ್ನಲ್ಲಿ ಬೈಕ್ ಎಗರಿಸಿದ ಬೆನ್ನಲ್ಲೇ ಇದೀಗ ಪೊಲೀಸರು ಚುರುಕಿನ ನಡೆ ತೋರಿಸಿದ್ದಾರೆ.
ಸುಳ್ಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಇತ್ತೀಚೆಗೆ ವ್ಯಕ್ತಿಯೊಬ್ಬ ಕದ್ದು ಪರಾರಿಯಾಗಿದ್ದ. ಬಳಿಕ ಆತ ಕಲ್ಲುಗುಂಡಿಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಇದಕ್ಕೂ ಮೊದಲು ಕೂಡ ಸುಳ್ಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿತ್ತು.
ಸರಣಿ ಕಳ್ಳತನದ ನಂತರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಇದೀಗ ರಾತ್ರಿ ಪಾಳಯದಲ್ಲಿ ಸುಳ್ಯ ಬಸ್ ಸ್ಟ್ಯಾಂಡ್ನಲ್ಲಿ ಹೋಮ್ ಗಾರ್ಡ್ ವೊಬ್ಬರನ್ನು ನಿಯೋಜಿಸಿದ್ದಾರೆ. ಮಾತ್ರವಲ್ಲ ಹೊಯ್ಸಳ ವಾಹನವೊಂದು ಬಸ್ ನಿಲ್ದಾಣದಲ್ಲಿ ನಿಂತಿರುತ್ತದೆ. ಈ ಹಿಂದೆ ಹೋಮ್ ಗಾರ್ಡ್ ರಾತ್ರಿ ಪಾಳಯದಲ್ಲಿ ಸುಳ್ಯ ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿನಿಂದ ಕಾರಣಾಂತರಗಳಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ವೇಳೆಯೇ ಅಲ್ಲಿ ಎರಡು ಬೈಕ್ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.