ನ್ಯೂಸ್ ನಾಟೌಟ್: ವಿಮಾನ ನಿಲ್ದಾಣದಲ್ಲಿ ಚಿನ್ನ, ಮಾದಕ ವಸ್ತುಗಳ ಕಳ್ಳಸಾಗಾಣಿಕೆಯ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಇದೀಗ ಟ್ರೋಲ್ ಬ್ಯಾಗ್ನಲ್ಲಿ ವನ್ಯಜೀವಿಗಳು ಪತ್ತೆಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಒಂದೆರಡು ಪ್ರಾಣಿಯಲ್ಲ, ಬರೋಬ್ಬರಿ 234 ವನ್ಯಜೀವಿಗಳನ್ನು ರಕ್ಷಿಸಲಾಗಿದೆ. ರಂಧ್ರಗಳಿರುವ ಬಾಕ್ಸ್ನೊಳಗೆ ಹೆಬ್ಬಾವು, ಗೋಸುಂಬೆ, ಆಮೆ, ಮೊಸಳೆ, ಕಾಂಗರೂ ಮರಿಗಳನ್ನು ತುಂಬಿಸಿದ್ದ ಬ್ಯಾಗ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎರ್ ಪೋರ್ಟ್ ಪೊಲೀಸರು ತಿಳಿಸಿದ್ದಾರೆ.
ಹೌದು ವನ್ಯಜೀವಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎಎಲ್) ಬಂಧಿಸಿದ್ದು, ಆರೋಪಿಯಿಂದ 234 ವನ್ಯಜೀವಿಗಳನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬ್ಯಾಂಕಾಕ್ನಿಂದ ವಿಮಾನದಲ್ಲಿ ಸೋಮವಾರ ರಾತ್ರಿ ಕೆಐಎಎಲ್ಗೆ ಬಂದಿದ್ದ ವ್ಯಕ್ತಿಯು ಲಗೇಜ್ ಬ್ಯಾಗ್ಗಳಲ್ಲಿ ವನ್ಯಜೀವಿಗಳನ್ನು ತುಂಬಿಸಿಕೊಂಡು ಕಳ್ಳ ಸಾಗಣೆ ಮಾಡುತ್ತಿದ್ದ. ಕಸ್ಟಮ್ಸ್ ಅಧಿಕಾರಿಗಳು ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಆ ವ್ಯಕ್ತಿಯ ಬ್ಯಾಗ್ ತಪಾಸಣೆ ಮಾಡಿದಾಗ ವನ್ಯಜೀವಿಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇವುಗಳು ಸಣ್ಣ-ಪುಟ್ಟ ಮರಿಗಳಾಗಿದ್ದು, ಬಾಕ್ಸ್ ನೊಳಗೆ ಹಲವು ಸಣ್ಣ ಪುಟ್ಟ ಬಾಕ್ಸ್ ಗಳನ್ನು ಮಾಡಿ ತರಲಾಗಿತ್ತು.
ಆರೋಪಿಯು ಹೆಬ್ಬಾವು, ಗೋಸುಂಬೆ, ಆಮೆ, ಮೊಸಳೆ, ಕಾಂಗರೂ ಮರಿಯನ್ನು ಬ್ಯಾಗ್ಗಳಲ್ಲಿ ತುಂಬಿಸಿಕೊಂಡು ಕಳ್ಳ ಸಾಗಣೆ ಮಾಡುತ್ತಿದ್ದ. ಇವುಗಳಲ್ಲಿ ಕೆಲವು ಅಂತಾರಾಷ್ಟ್ರೀಯ ವ್ಯಾಪಾರ ಒಡಂಬಡಿಕೆಯಲ್ಲಿ(ಸಿಐಟಿಇಎಸ್) ಪಟ್ಟಿ ಮಾಡಲಾಗಿರುವ ಅಳಿವಿನಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳಾಗಿವೆ ಎನ್ನಲಾಗಿದೆ.
ಬಂಧಿತನ ವಿರುದ್ಧ ಅಧಿಕಾರಿಗಳು ಸೆಕ್ಷನ್ 104 ರಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.