ನ್ಯೂಸ್ ನಾಟೌಟ್: ಭೀಕರ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾದ ಪಾಂಗಳ ಹುಡುಗಿ ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಒತ್ತಾಯ ಇದೀಗ ಕರಾವಳಿಯಾದ್ಯಂತ ಭಾರಿ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ವಿವಿಧ ಕಡೆ ಫ್ಲೆಕ್ಸ್ ಗಳು ಬೀಳುತ್ತಿವೆ. ಇದೀಗ ಸುಳ್ಯದ ಹಲವು ಕಡೆ ಫ್ಲೆಕ್ಸ್ ಗಳು ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಬಿದ್ದಿವೆ. ಈ ನಡುವೆ ಸೌಜನ್ಯಳಿಗೆ ನ್ಯಾಯವನ್ನು ಒದಗಿಸಿಕೊಡಬೇಕು ಎಂಬ ಹೆಸರಿನಲ್ಲಿ ಸೌಜನ್ಯ ಅಣ್ಣ -ತಮ್ಮಂದಿರ ಬಳಗ ಸುಳ್ಯ ಎಂಬ ಫ್ಲೆಕ್ಸ್ನ ಪೋಸ್ಟ್ವೊಂದು ವೈರಲ್ ಆಗುತ್ತಿದೆ. ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಳ್ಯ ನಗರದ ಹಳೆ ಬಸ್ ನಿಲ್ದಾಣದ ಬಳಿಯ ಪೆಟ್ರೋಲ್ ಪಂಪ್ ಹತ್ತಿರ ಬ್ಯಾನರ್ ಅಳವಡಿಸಲಾಗಿದೆ.
ಸೌಜನ್ಯ ಹೆಣ್ಣಲ್ಲವೇ? ಹನ್ನೊಂದು ವರ್ಷವಾದರೂ ಈ ಬಡ ಹೆಣ್ಣಿನ ಅತ್ಯಾಚಾರ ಮಾಡಿ ಕೊಲೆ ಮಾಡಿದವರು ಇನ್ನೂ ಯಾಕೆ ಪತ್ತೆಯಾಗಿಲ್ಲ. ಸೌಜನ್ಯ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ..? ಮಹೇಶಣ್ಣನ ಹೋರಾಟ ಪದವಿ, ಅಧಿಕಾರ, ಟಿಕೆಟ್ಗಾಗಿ ಅಲ್ಲ. ಅವರು ಕೇಸರಿಯನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿಲ್ಲ. ಕಳೆದ ಹನ್ನೊಂದು ವರ್ಷದಿಂದ ಒಬ್ಬ ಸಹೋದರಿಗಾಗಿ ಬಲಾಢ್ಯರನ್ನು ನಡುಗಿಸಿದ ಗಂಡೆದೆ ಅದು ಮಹೇಶ್ ಶೆಟ್ಟಿ ತಿಮರೋಡಿ.
ನಾವು ಕೇಳುತ್ತಿರುವೆವು ನಮ್ಮ ಸಹೋದರಿಗೆ ನ್ಯಾಯ ದೊರಕಿಸಿ ಕೊಡಿ, ನಿರಪರಾಧಿ ಸಂತೋಷ್ ರಾವ್ ಹನ್ನೆರಡು ವರ್ಷ ಜೈಲಿನಲ್ಲಿ ಕೊಳೆಯುವ ರೀತಿ ಮಾಡಿದ ವ್ಯವಸ್ಥೆಗೆ ಧಿಕ್ಕಾರವಿರಲಿ. ನ್ಯಾಯ ವ್ಯವಸ್ಥೆ ಗುಡಿಸಲಿನಲ್ಲಿ ಇರುವವನಿಗೂ ಅರಮನೆಯಲ್ಲಿ ವಾಸ ಮಾಡುವವನಿಗೂ ಒಂದೇ ರೀತಿ ಇರಲಿ. ವಿಶೇಷ ತನಿಖಾ ದಳ ಮರು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು. ಸಹೋದರಿ ಸೌಜನ್ಯ ಆತ್ಮಕ್ಕೆ ಶಾಂತಿ ದೊರಕಿಸಿಕೊಡಿ, ಪ್ರಜ್ಞಾವಂತ ನಾಗರಿಕರೇ ಎಚ್ಚೆತ್ತುಕೊಳ್ಳಿ , ಅಪರಾಧಿಗಳಿಗೆ ಗಲ್ಲು ಶಿಕ್ಷೆ ಆಗುವ ತನಕ ನಮ್ಮ ಹೋರಾಟ ಮುಂದುವರಿಯಲಿ ಎಂದು ಸೌಜನ್ಯ ಅಣ್ಣ -ತಮ್ಮಂದಿರ ಬಳಗ ಸುಳ್ಯ ಫ್ಲೆಕ್ಸ್ ಹಾಕಲಾಗಿದೆ.