ನ್ಯೂಸ್ ನಾಟೌಟ್ : ತಂದೆ-ತಾಯಿ ಹಾಗೂ ಮಗುವಿನ ಸಂಬಂಧಕ್ಕೆ ಬೆಲೆ ಕಟ್ಟೋದಕ್ಕೆ ಅಸಾಧ್ಯ.ಒಂದು ಕ್ಷಣ ಹೆತ್ತ ಮಗು ದೂರಾವಾದ್ರೂ ಏನೋ ಒಂದು ಸಂಕಟ.ಆರೋಗ್ಯ ಕೆಟ್ಟರಂತು ಭಯದ ವಾತಾವರಣವೇ ಆವರಿಸಿಕೊಳ್ಳುತ್ತೆ.ಇನ್ನು ಕೆಲವು ದಂಪತಿ ಮಕ್ಕಳಾಗದೇ ಕೊರಗುವವರು ತುಂಬಾ ಮಂದಿ ಇದ್ದಾರೆ.ದೈವ-ದೇವರ ಮೊರೆ ಹೋಗುತ್ತಾರೆ.ಆದರೆ ಇಲ್ಲೊಂದು ದಂಪತಿ ಅವಸ್ಥೆ ನೋಡಿದ್ರೆ ಸಿಟ್ಟು ನೆತ್ತಿಗೇರದೆ ಇರಲಿಕ್ಕಿಲ್ಲ.ಐಫೋನ್ಗಾಗಿ ಹೆತ್ತ ಕರುಳ ಕುಡಿಯನ್ನೇ ಮಾರಾಟ ಮಾಡಿರುವ ದುರಂತ ಕಥೆಯಿದು.ಅಯ್ಯೋ.. ತನ್ನ ಮಗುವಿಗಿಂತ ಐಫೋನೇ ಹೆಚ್ಚಾಯಿತಲ್ಲ ಅನ್ನುವ ನೋವು ಎಲ್ಲರನ್ನು ಕಾಡದಿರದು..!
ಮನುಷ್ಯನಿಗೆ ಆಸೆಗಳು ಇರಬೇಕು.ದುಡ್ಡು ಮಾಡಬೇಕೆನ್ನುವ ಛಲ ಇರಬೇಕು.ಆದರೆ ಇಂತಹ ನೀಚ ಕೃತ್ಯಕ್ಕೆ ಇಳಿದರೆ ಕಡೆಗೂ ಯಾವುದು ಉಳಿಯುದಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.ಪಶ್ಚಿಮ ಬಂಗಾಳದಲ್ಲಿ ಈ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ಇಲ್ಲಿ ದಂಪತಿ ತಮ್ಮ ಮಗುವನ್ನು ಐಫೋನ್ ಖರೀದಿಸಲು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಅವರು ಇನ್ಸ್ಟಾಗ್ರಾಮ್ ರೀಲ್ಗಳನ್ನು ಮಾಡಲು ಐಫೋನ್ ಖರೀದಿಸಲು ಬಯಸಿದ್ದರು ಎನ್ನಲಾಗಿದ್ದು, ಫೋನ್ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗಿದೆ ಹೀಗಾಗಿ ತಮ್ಮ ಮಗುವನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ ಅಲ್ಲದೆ ಮಗುವನ್ನು ಮಾರಾಟ ಕೂಡ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಹಾಗೂ ಮಗುವನ್ನು ಖರೀದಿಸಿದ ಮಹಿಳೆಯನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು,ಮಗುವಿನ ತಂದೆ ಜೈದೇವ್ ಇನ್ನೂ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಪತ್ತೆಗೆ ಬಲೆ ಬಿಸಿದ್ದಾರೆ.
ದಂಪತಿ ಸತಿ ಹಾಗೂ ಜೈದೇವ್ ಹಣಕ್ಕಾಗಿ ಪರದಾಡುತ್ತಿದ್ದರು ಎನ್ನಲಾಗಿದ್ದು, ಹತ್ತಿರದ ಮನೆಯವರಿಂದಲೂ ಸಾಲ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.ಆದರೆ ಇತ್ತೀಚಿನ ದಿನಗಳಲ್ಲಿ ದಂಪತಿ ವರ್ತನೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು,ದಂಪತಿಗೆ ಎಂಟು ತಿಂಗಳ ಹೆಣ್ಣು ಮಗು ಕೂಡಾ ಇತ್ತು.ಆದರೆ ಆ ಹೆಣ್ಣು ಮಗು ಕಳೆದ ಕೆಲದಿನಗಳಿಂದ ಕಾಣ್ಲಿಕ್ಕೆ ಸಿಕ್ಕಿರಲಿಲ್ಲ.ಈ ಹಿನ್ನಲೆಯಲ್ಲಿ ನೆರೆಹೊರೆ ಮನೆಯವರಿಗೆ ದಂಪತಿ ಮೇಲೆ ಸಂದೇಹ ಮೂಡಿತ್ತು.
ಪೋಷಕರ ಕೈಯಲ್ಲಿ ಐಫೋನ್ ಬಂದಿದ್ದು ನೆರೆಹೊರೆಯವರಲ್ಲಿ ಸಾಕಷ್ಟು ಗೊಂದಲವನ್ನುಂಟು ಮಾಡಿತ್ತು.ಮನೆಯಲ್ಲಿ ಮಗು ಕಾಣಿಸುತ್ತಿಲ್ಲ.ದಂಪತಿ ಕೈಯಲ್ಲಿ ಐಫೋನ್ ಇದೆ.ಇದು ಹೇಗೆ ಸಾಧ್ಯವೆಂದು ಪಟ್ಟು ಬಿಡದೇ ವಿಚಾರಣೆ ಮಾಡೋದಕ್ಕೆ ಮುಂದಾಗಿದ್ದಾರೆ.ಇದೆಲ್ಲವನ್ನು ಗಮನಿಸಿದ ನೆರೆಹೊರೆಯ ಮಂದಿ ಈ ಪೋಷಕರಲ್ಲಿ ಮಗುವಿನ ವಿಚಾರ ಕೇಳಿದಾಗ ಮಗುವನ್ನು ಮಾರಾಟ ಮಾಡಿರುವ ವಿಷಯ ಬಾಯಿ ಬಿಟ್ಟಿದ್ದಾರೆ.
ಕೂಡಲೇ ನೆರೆಹೊರೆಯವರು ಇದಕ್ಕೆ ಸಂಬಂಧಪಟ್ಟ ಹಾಗೆ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪೋಷಕರ ಮನೆಯತ್ತ ಧಾವಿಸಿದ್ದಾರೆ. ಈ ವೇಳೆಗೆ ಮಹಿಳೆಯ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ಮಗುವನ್ನು ಬಚಾವ್ ಮಾಡಿದ್ದಾರೆ.ಹಾಗೂ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಸ್ಪೋಟಕ ಮಾಹಿತಿಯನ್ನು ಆ ಮಹಿಳೆ ತೆರೆದಿಟ್ಟಿದ್ದಾಳೆ. ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಿಗೆ ಹೋಗಿ ಇನ್ಸ್ಟಾಗ್ರಾಮ್ ರೀಲ್ ಮಾಡಲು ಮೊಬೈಲ್ ತೆಗೆದುಕೊಳ್ಳಲು ಹಣದ ಅವಶ್ಯಕತೆ ಇದ್ದುದರಿಂದ ಇಂತಹ ಉಪಾಯ ಹೊಳೆಯಿತು.ಹೀಗಾಗಿ ಮಗುವನ್ನು ಮಾರಾಟ ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ತಪ್ಪು ಒಪ್ಪಿಕೊಂಡಿದ್ದಾರೆ.ಸದ್ಯ ಪೊಲೀಸರು ತಲೆಮರೆಸಿಕೊಂಡಿರುವ ಮಹಿಳೆಯ ಪತಿಯ ಬಂಧನಕ್ಕೆ ಬಲೆ ಬಿಸಿದ್ದಾರೆ.