ನ್ಯೂಸ್ ನಾಟೌಟ್: ಲೋಕಾಯುಕ್ತ ಪೊಲೀಸರ ಬಂಧನದಲ್ಲಿರುವ ಪುತ್ತೂರು ಮೂಲದ ಬೆಂಗಳೂರಿನ ಕೆ.ಆರ್. ಪುರಂನಲ್ಲಿ ತಹಶೀಲ್ದಾರ್ ಆಗಿರುವ ಅಜಿತ್ ಕುಮಾರ್ ರೈ ಅವರನ್ನು ಬೆಂಗಳೂರಿನಿಂದ ದಿಢೀರ್ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಈ ನಡೆಗೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನ ತಹಶೀಲ್ದಾರ್ (ಗ್ರೇಡ್ 1) ಆಗಿದ್ದ ಅಜಿತ್ ರೈ ಬಳಿ ಅಪಾರ ಪ್ರಮಾಣದ ಬೇನಾಮಿ ಆಸ್ತಿ ಮತ್ತು ಅಕ್ರಮ ಹಣ ಪತ್ತೆಯಾಗಿತ್ತು. ಇದೀಗ ಗ್ರೇಡ್ -1 ಹುದ್ದೆಯಿಂದ ಗ್ರೇಡ್ – 2 ತಹಸೀಲ್ದಾರ್ ಆಗಿ ಹಿಂಬಡ್ತಿಗೊಳಿಸಿ ಸರ್ಕಾರ ವರ್ಗಾವಣೆ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ರೂ ಸರ್ಕಾರ ಮಾತ್ರ ಅಮಾನತುಗೊಂಡ ತಹಸೀಲ್ದಾರರನ್ನು ತರಾತುರಿಯಲ್ಲಿ ರಾಯಚೂರಿಗೆ ವರ್ಗಾಯಿಸಿದೆ.
ಸರ್ಕಾರಿ ಅಧಿಕಾರಿ ಅಥವಾ ಯಾವುದೇ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎರಡಕ್ಕಿಂತ ಹೆಚ್ಚು ದಿನ ಬಂಧಿಯಾದರೆ ಆತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬಹುದು. ಆದರೆ, ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಭ್ರಷ್ಟ ತಹಶೀಲ್ದಾರ್ ಅಜಿತ್ ರೈಯನ್ನು ಬಂಧನದಲ್ಲಿರುವಾಗಲೇ ರಾಜ್ಯ ಸರ್ಕಾರ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರಿಂದ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು. ಅಜಿತ್ ರೈ ಅಧಿಕಾರದಲ್ಲಿದ್ದರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಆದರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈಯನ್ನು ಬಂಧನದಿಂದ ಮುಕ್ತಗೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾಯಿಸಿದೆ.
ಲೋಕಾಯುಕ್ತ ಪೊಲೀಸರು (Lokayukta Raid) ಬಂಧಿಸಿದ್ದ 15 ಅಧಿಕಾರಿಗಳಲ್ಲಿ ಅಜಿತ್ ರೈ ಒಬ್ಬನೇ ಆ ೧೪ ಜನರನ್ನೂ ಮೀರಿಸುವ ಸಂಪತ್ತು ಹೊಂದಿದ್ದಾರೆ. ಪುತ್ತೂರಿನಲ್ಲಿ ಸರ್ವೇಯರ್ ಆಗಿದ್ದ ಅಪ್ಪ ಆನಂದ್ ರೈ ಅವರು ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಾಗ ಅನುಕಂಪದ ಭಿಕ್ಷೆಯಾಗಿ ಸಿಕ್ಕಿದ ಸರ್ಕಾರಿ ಉದ್ಯೋಗವನ್ನು ತನ್ನ ಐಷಾರಾಮಿ ಮತ್ತು ಶೋಕಿ ಹಾಗೂ ಕನಸಿನ ಬದುಕಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ಬಳಸಿಕೊಂಡ ಅಜಿತ್ ರೈಯ ಬಣ್ಣ ಬಣ್ಣದ ಬದುಕಿನ ಕಥೆ ವಿಚಿತ್ರವಾಗಿದೆ.