ನ್ಯೂಸ್ ನಾಟೌಟ್: ಉತ್ತರಪ್ರದೇಶದ ಚಾಂದೌಲಿಯಲ್ಲಿ ಬಿಸಿಗಾಳಿಗೆ ಇಬ್ಬರು ಇನ್ಸ್ ಪೆಕ್ಟರ್ಗಳು ಸಾವನ್ನಪ್ಪಿರುವ ಘಟನೆ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ. ಪೂರ್ವಾಂಚಲ್ನಲ್ಲಿ ಬಿಸಿಗಾಳಿಯ ಅಬ್ಬರ ದಿನದಿಂದ ದಿನಕ್ಕೆ ಮೀತಿ ಮೀರುತ್ತಿದೆ. ಬಾಬುರಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ರವೀಂದರ್ ಸಿಂಗ್ ಮತ್ತು ಚಂದೌಲಿ ಪೊಲೀಸ್ ಲೈನ್ ನಲ್ಲಿ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟರ್ ರಾಮಾಶ್ರಯ ಅವರು ಅನಾರೋಗ್ಯದ ಕಾರಣ ಮಂಗಳವಾರ ಮೃತಪಟ್ಟಿದ್ದಾರೆ. ಇನ್ನೊಂದು ಕಡೆ ಬಲರಾಂಪುರದಲ್ಲಿ ಸಿಎಂ ಕಾರ್ಯಕ್ರಮಕ್ಕೆ ನಿಯೋಜಿತ ಆಗಿದ್ದ ಸಬ್ ಇನ್ಸ್ಪೆಕ್ಟರ್ ಸಹ ಮೃತಪಟ್ಟಿದ್ದಾರೆ.
ಸೋಮವಾರ ಸಂಜೆ ಗಸ್ತಿನಲ್ಲಿದ್ದಾಗ ಇನ್ಸ್ಪೆಕ್ಟರ್ ರವೀಂದ್ರ ಸಿಂಗ್ ಅವರ ಆರೋಗ್ಯ ಹಠಾತ್ ಹದಗೆಟ್ಟಿದೆ. ತಕ್ಷಣ ಅವರನ್ನು ವಾರಾಣಸಿಗೆ ಕರೆದೊಯ್ಯಲಾಗಿದೆಯಾದರೂ ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ವಾಸ್ತವವಾಗಿ ರಾಜ್ಯದಲ್ಲಿ ಬೀಸುತ್ತಿರುವ ಬಿಸಿ ಗಾಳಿ, ಹೆಚ್ಚುತ್ತಿರುವ ತಾಪಮಾನದಿಂದ ಈ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ. ಬಿಸಿಗಾಳಿಯ ಅಬ್ಬರಕ್ಕೆ ಸಾಮಾನ್ಯ ಜನರು ತೊಂದರೆಗೀಡಾಗಿದ್ದಾರೆ. ಹಿಟ್ ಸ್ಟ್ರೋಕ್ ಅನ್ನು ತಪ್ಪಿಸಲು ಜನರು ತಮ್ಮ ಮನೆಗಳಲ್ಲೇ ಇರುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ರವೀಂದ್ರ ಸಿಂಗ್ ಸೋಮವಾರ ಸಂಜೆ ಕರ್ತವ್ಯದಿಂದ ಹಿಂದಿರುಗಿದ ನಂತರ, ಅವರ ಆರೋಗ್ಯವು ಹಠಾತ್ ಹದಗೆಟ್ಟಿದೆ. ಹೀಗಾಗಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದರೂ ಅವರ ಆರೋಗ್ಯ ಸ್ಥಿತಿ ಸುಧಾರಿಸದೇ ಇದ್ದಾಗ ತಡರಾತ್ರಿ 1 ಗಂಟೆ ಸುಮಾರಿಗೆ ಠಾಣೆಯ ಮುಖ್ಯಸ್ಥರು ಹಾಗೂ ಇತರ ಪೊಲೀಸರು ಚಿಕಿತ್ಸೆಗಾಗಿ ವಾರಾಣಸಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಅವರು ಮಾರ್ಗಮಧ್ಯೆದಲ್ಲೇ ಮೃತಪಟ್ಟಿದ್ದಾರೆ.
ಇನ್ನೊಂದೆಡೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿಯ ವೇಳೆ ಕರ್ತವ್ಯ ನಿರ್ವಹಿಸಲು ಕುಶಿ ನಗರದ ಪೊಲೀಸ್ ಲೈನ್ನಲ್ಲಿ ನಿಯೋಜನೆಗೊಂಡ ಸಬ್ ಇನ್ಸ್ಪೆಕ್ಟರ್ ಕನ್ಹಯ್ಯಾ ಕುಮಾರ್ ಸೋಮವಾರ ಬಲರಾಂಪುರ ಜಿಲ್ಲೆಗೆ ಬಂದಿದ್ದರು. ಮಂಗಳವಾರ ಕನ್ಹಯ್ಯಾ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಮಾಹಿತಿ ಪಡೆದ ತಕ್ಷಣ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಮೃತ ಸಬ್ ಇನ್ಸ್ಪೆಕ್ಟರ್ ರವೀಂದ್ರ ಸಿಂಗ್ ಜೌನ್ಪುರ ಜಿಲ್ಲೆಯ ಸುರೇರಿ ಪಟ್ಟಣದ ನಿವಾಸಿಯಾಗಿದ್ದಾರೆ. ಮೃತರಿಗೆ ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ಅವರು ಸೇವೆಯಿಂದ ನಿವೃತ್ತಿ ಆಗಲಿದ್ದರು. ಮೃತ ದೇಹದ ಮರಣೋತ್ತರ ಪರೀಕ್ಷೆ ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು.
ಇನ್ನು ರಮಾಶ್ರಯ ಅವರು ಬಲ್ಲಿಯಾ ಜಿಲ್ಲೆಯ ಉಭಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ಸ್ಪರ್ ಬಹೋಖಾ ಗ್ರಾಮದ ನಿವಾಸಿಯಾಗಿದ್ದರು. ಪ್ರಸ್ತುತ ಪೊಲೀಸ್ ಲೈನ್ನ ಕ್ಯೂಆರ್ಟಿಯಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ರಾಮಾಶ್ರಯ ಪ್ರಸಾದ್ ಅವರ ಆರೋಗ್ಯ ಹಠಾತ್ ಹದಗೆಟ್ಟಿತ್ತು. ಆಗ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪರಿಸ್ಥಿತಿ ಸುಧಾರಿಸದ ಕಾರಣ ವಾರಾಣಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ರಮಾಶ್ರಯ ಮಂಗಳವಾರ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಬಿಸಿಲಿನ ತಾಪ ದಿನದಿನವೂ ಏರುತ್ತಿರುವುದರಿಂದ ಉತ್ತರಪ್ರದೇಶದಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪಾರ್ಶ್ವವಾಯು ಪೀಡಿತರ ಸಂಖ್ಯೆಯಲ್ಲೂ ಗಣನೀಯ ಹೆಚ್ಚಳವಾಗುತ್ತಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಆಸ್ಪತ್ರೆಯ ಸಿಎಂಎಸ್ ಡಾ.ಊರ್ಮಿಳಾ ಸಿಂಗ್ ಹೇಳುವ ಪ್ರಕಾರ ಕಳೆದ 3 ದಿನಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 6 ಮಂದಿ ತಮ್ಮ ಉಸಿರು ಚಲ್ಲಿದ ಬಳಿಕ ಆಸ್ಪತ್ರೆಗೆ ಕರೆ ತರಲಾಗಿತ್ತು. ಆರು ಮಂದಿ ಚಿಕಿತ್ಸೆ ವೇಳೆ 6 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
Follow our Social media pages:
FB PAGE : https://www.facebook.com/NewsNotOut2023
YouTube : https://www.youtube.com/@newsnotout8209
Insta : https://www.instagram.com/newsnotout/
Tweet : https://twitter.com/News_Not_Out