ನ್ಯೂಸ್ ನಾಟೌಟ್ : ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,ವಿದ್ಯಾರ್ಥಿಗಳು ಪವಾಡ ಸದೃಶ ಪಾರಾದ ಘಟನೆ ವರದಿಯಾಗಿದೆ.ಕೋಚಿಂಗ್ ಸೆಂಟರ್ನ ಒಳಗಿದ್ದ ವಿದ್ಯಾರ್ಥಿಗಳು ಕಟ್ಟಡದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ!
ದೆಹಲಿಯ ಮುಖರ್ಜಿ ನಗರದಲ್ಲಿ ಈ ಘಟನೆ ಸಂಭವಿಸಿದೆ. ಅಗ್ನಿ ಅವಘಡ ಸಂಭವಿಸುವ ವೇಳೆ ವಿದ್ಯಾರ್ಥಿಗಳು ಕೋಚಿಂಗ್ ಸೆಂಟರ್ನ ಒಳಗಿದ್ದರೆಂದು ತಿಳಿದು ಬಂದಿದೆ.ಸುಮಾರು ಮಧ್ಯಾಹ್ನ 12.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಮೇಲಿನ ಮಹಡಿಯಿಂದ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತಮ್ಮ ಬೆನ್ನಿನ ಮೇಲೆ ಬ್ಯಾಗ್ಗಳನ್ನು ಹಾಕಿಕೊಂಡು ತಂತಿಗಳನ್ನು ಬಳಸಿ ಕೆಳಗೆ ಹಾರುತ್ತಿರುವ ದೃಶ್ಯಗಳು ವೈರಲ್ ಆಗಿವೆ.ಆದರೆ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
11 ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.ವಿದ್ಯಾರ್ಥಿಗಳು ಕೆಳಗಿಳಿಯುವಾಗ ಇತರ ಮಹಡಿಗಳಲ್ಲಿ ಅಳವಡಿಸಲಾದ ಎಸಿಗಳನ್ನೂ ಸಹ ಬಳಸಿಕೊಂಡು ಪ್ರಾಣ ಉಳಿಸಿಕೊಂಡಿದ್ದು ವಿಶೇಷವೆಂಬಂತಿದೆ.ಅಧಿಕಾರಿಗಳು ಕೂಡ ವಿದ್ಯಾರ್ಥಿಗಳನ್ನು ಅಪಾಯದಿಂದ ಪಾರು ಮಾಡಲು ಸಹಾಯ ಮಾಡಿದರು.ಈ ಬಗ್ಗೆ ಮಾತನಾಡಿರುವ ದಿಲ್ಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗಾರ್ಗ್ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಹೇಳೋದೇನು?
ವಿದ್ಯುತ್ ಮೀಟರ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಉಪಕರಣದಿಂದ ಹೊರಹೊಮ್ಮುವ ಹೊಗೆಯಿಂದಾಗಿ ವಿದ್ಯಾರ್ಥಿಗಳು ಭಯಭೀತರಾದರು ಮತ್ತು ಕೋಚಿಂಗ್ ಸೆಂಟರ್ನ ಹಿಂಭಾಗದಿಂದ ಕೆಳಗೆ ಇಳಿಯಲು ಪ್ರಾರಂಭಿಸಿದರು ಎಂದು ತಿಳಿಸಿದ್ದಾರೆ.ಒಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರಾಣ ಉಳಿಯಿತಲ್ಲ ದೇವರೇ ಕಾಪಾಡಿದ್ದು ಎಂದು ಜನ ನಿಟ್ಟುಸಿರು ಬಿಟ್ಟರು.