ನ್ಯೂಸ್ ನಾಟೌಟ್: ಅಮಾಯಕರ ಚಿನ್ನದ ಸರ ಹಾಗೂ ದ್ವಿಚಕ್ರ ವಾಹನವನ್ನು ಕದ್ದು ತಲೆಮರೆಸಿಕೊಳ್ಳುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಳೆದ ಕೆಲವು ಸಮಯಗಳಿಂದ ಮಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಸರಗಳ್ಳತನ ಹಾಗೂ ವಾಹನ ಕಳ್ಳತನ ಮಾಡುತ್ತಿದ್ದರು. ಇವರನ್ನು ಹಿಡಿಯುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. 8 ಸರಗಳ್ಳತನ, 4 ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುರತ್ಕಲ್ ನ ಹಬೀಬ್ ಹಸನ್ , ಉಳ್ಳಾಲ ನಿವಾಸಿ ಮಹಮ್ಮದ್ ಫೈಜಲ್ ನನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಟ್ಟು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಮಂಗಳೂರು ಪೊಲೀಸ್ಕಮೀಷನರ್ ಕುಲ್ದೀಪ್ ಕುಮಾರ್ ಜೈನ್ ಬಹುಮಾನ ಘೋಷಿಸಿದ್ದಾರೆ.