ನ್ಯೂಸ್ ನಾಟೌಟ್ : ಬೆಲೆಬಾಳುವ ಹರಳುಗಳನ್ನು ಒಳಗೊಂಡ ಆನೆ ದಂತದಿಂದ ಮಾಡಿರುವ ಕೈಗೆ ಧರಿಸುವ ಕಡಗದಂತಹ ಆಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗುರುವಾರ ಬಂಧಿಸಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಸಿದ್ದಾಪುರ ಕಡೆಗೆ ತೆರಳುವ ಮಾರ್ಗದ ಬಸ್ ತಂಗುದಾಣದ ಬಳಿ ಆನೆ ದಂತದಿಂದ ಮಾಡಿರುವ ಕೈ ಬಳೆ ಮಾದರಿಯ ನೀಲಿ ಮತ್ತು ಹಸಿರು ಬಣ್ಣದ ಹರಳುಗಳನ್ನು ಒಳಗೊಂಡಿದ್ದ 2 ಕಡಗಗಳನ್ನು ಮಾರಾಟ ಮಾಡಲು ಈತ ಯತ್ನಿಸುತ್ತಿದ್ದ ಕೊಳ್ಳೇಗಾಲ ಮೂಲದ ಪಿ.ಪ್ರದೀಪ್ ಕುಮಾರ್(42) ಎಂಬಾತ ಬಂಧಿಸಲಾಗಿದೆ.
ಖಚಿತ ಮಾಹಿತಿಯ ಹಿನ್ನೆಲೆ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭ ಆರೋಪಿ ಮಾಲು ಸಹಿತ ಸೆರೆ ಸಿಕ್ಕಿದ್ದಾನೆ. ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು ಬಂಧಿತ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್ಚಂದ್ರ ಅವರ ನಿರ್ದೇಶನದಂತೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರಿ ದಳದ ಪಿ.ಎಸ್.ಐ ಸಿ.ಯು.ಸವಿ, ಸಿಬ್ಬಂದಿಗಳಾದ ಶೇಖರ್, ರಾಘವೇಂದ್ರ, ಯೋಗೇಶ್, ಉಮೇಶ್, ಸ್ವಾಮಿ ಹಾಗೂ ಮಂಜುನಾಥ ಕಾರ್ಯಾಚರಣೆ ನಡೆಸಿದರು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.