ನ್ಯೂಸ್ ನಾಟೌಟ್ : ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಡಿವಿ ಸದಾನಂದ ಗೌಡ ಅವರ ಭಾವಚಿತ್ರವಿರುವ ಬ್ಯಾನರ್ ನಲ್ಲಿ ಶ್ರದ್ದಾಂಜಲಿ ಎಂದು ಬರೆದು , ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿತ್ತು.ಇದೀಗ ಪೊಲೀಸರು ಬೆತ್ತ ಹಿಡಿದು ಬಾರಿಸಿ ಬೆನ್ನು ಪುಡಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನುವ ಆರೋಪ ಕೇಳಿ ಬಂದಿದೆ.
ಥಳಿತದಿಂದ ಗಾಯಗೊಂಡ ಯುವಕರ ರಕ್ತಸಿಕ್ತ ಚಿತ್ರಗಳು ಹಾಗೂ ತಡರಾತ್ರಿ ಪುತ್ತೂರು ಡಿವೈಎಸ್ ಪಿ ಕಚೇರಿಯಿಂದ ನಡೆದಾಡಲೂ ಕಷ್ಟ ಪಡುವ ಯುವಕರ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ. ಫೋಟೊದಲ್ಲಿ ಬೆನ್ನು ಹಾಗೂ ಸೊಂಟದ ಹಿಂಭಾಗದಲ್ಲಿ ಥಳಿಸಿರುವುದು ಕಾಣುತ್ತಿದೆ. ಹಲ್ಲೆಗೊಳಗಾದ ಯುವಕರು ಬಿಜೆಪಿ ಕಾರ್ಯಕರ್ತರಾಗಿದ್ದು, ಅದರಲ್ಲಿ ಕೆಲವರು ಈ ಬಾರಿ ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. ಉಳಿದವರು ಬಿಜೆಪಿಯ ಪರವೇ ಪ್ರಚಾರ ನಡೆಸಿದ್ದರು ಎಂದು ತಿಳಿದು ಬಂದಿದೆ.
ಕಾರ್ಯಕರ್ತರು ಬಿಜೆಪಿ ಸೋಲಿಗೆ ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣವೆಂದು ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಬ್ಯಾನರ್ ಅಳವಡಿಸಿದ್ದರು.ಪುತ್ತೂರು ಬಸ್ ಸ್ಟ್ಯಾಂಡಿನ ಹತ್ತಿರ ಬ್ಯಾನರ್ ಹಾಕಿದ್ದರು. ಬ್ಯಾನರ್ ಫೋಟೋ ವೈರಲ್ ಆಗಿ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಆಗುತ್ತಲೇ ಪೊಲೀಸರಿಗೆ ಒತ್ತಡ ಬಂದಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸಿ, ಬೆಂಡೆತ್ತಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದರು.