ನ್ಯೂಸ್ ನಾಟೌಟ್ :ಚುನಾವಣಾ ದಿನಾಂಕ ಸಮೀಪಿಸುತ್ತಿದೆ. ಈ ಹಿನ್ನಲೆ ಪೊಲೀಸರು ಅಲರ್ಟ್ ಆಗಿದ್ದು,ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 44.20 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅವರು ಮಾಹಿತಿ ನೀಡಿದ್ದು, ಕ್ರಮ ಕೈಗೊಳ್ಳಲಾಗಿದೆಯೆಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮಾಹಿತಿ ನೀಡಿದ ಅವರು,ಇದೇ ಅವಧಿಯಲ್ಲಿ ನಗದು ಸೇರಿದಂತೆ 2.16 ಲಕ್ಷ ರೂ. ಮೌಲ್ಯದ ಗಾಂಜಾ, ಚರಸ್, ಎಂಡಿಎಂಎಗಳನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ಮಂದಿಯನ್ನು ಗಡಿಪಾರು ಮಾಡಲಾಗಿದೆಯೆಂದು ಈ ಸಂದರ್ಭ ತಿಳಿಸಿದರು.
ಚುನಾವಣೆ ಹಿನ್ನಲೆ ಹದ್ದಿನ ಕಣ್ಣಿಟ್ಟಿದ್ದು,ಅಗತ್ಯ ದಾಖಲೆ ಇಲ್ಲದ 25.52 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ಬಳಿಕ 17.20 ಲಕ್ಷ ರೂ.ಗಳನ್ನು ಹಿಂದಕ್ಕೆ ನಿಡಲಾಗಿದ್ದು,ಉಳಿದ ಹಣಕ್ಕೆ ಸಂಬಂಧಪಟ್ಟ ಹಾಗೆ ವಿಚಾರಣೆ ನಡೆಯುತ್ತಿದೆಯೆಂದು ಹೇಳಿದರು. ಸೂಕ್ತ ದಾಖಲೆ, ಕಾರಣಗಳಿಲ್ಲದೆ ಸಾಗಿಸಲಾಗುತ್ತಿದ್ದ 1.50 ಲಕ್ಷ ರೂ. ಮೌಲ್ಯದ ಸೀರೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಈ ವೇಳೆ ತಿಳಿಸಿದರು.