ನ್ಯೂಸ್ ನಾಟೌಟ್ : ಅಪರೂಪದ ಫಲಿತಾಂಶಕ್ಕೆ ಸುಳ್ಯ ಸಾಕ್ಷಿಯಾಗಿದೆ. ತಾಯಿ-ಮಗಳು ಜತೆಯಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿರುವ ಅಚ್ಚರಿಯ ಘಟನೆ ಸುಳ್ಯದ ಜಯನಗರದಿಂದ ವರದಿಯಾಗಿದೆ.ಈ ಮೂಲಕ ಕೆಲ ವರ್ಷಗಳ ತಾಯಿ ಕನಸು ನನಸಾಗಿದೆ.
ರಮೇಶ್ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಮತ್ತು ಮಗಳು.ಅಂದ ಹಾಗೆ ಗೀತಾ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ.ತಮ್ಮ ವೃತ್ತಿ ಜೀವನದ ಮಧ್ಯೆ ಬಿಡುವು ಮಾಡಿಕೊಂಡು ಅಧ್ಯಯನ ಮುಂದುವರಿಸಿದ್ದರು.ಈ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು, ಇದೀಗ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾವಿಭಾಗದಲ್ಲಿಯೂ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಇವರಿಗೀಗ 45 ವರ್ಷ ತುಂಬಿದ್ದು,ಅವರ ಹೈಸ್ಕೂಲ್ ವಿದ್ಯಾಭ್ಯಾಸ ಅನಿವಾರ್ಯ ಕಾರಣಗಳಿಂದ ಅರ್ಧಕ್ಕೆ ನಿಂತು ಹೋಗಿತ್ತು. ಕಳೆದ ಎರಡು ವರ್ಷಗಳ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಬಳಿಕ ಇದೀಗ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸುದ್ದಿಯಾಗಿದ್ದಾರೆ.ಸುಳ್ಯದ ಗಾಂಧಿನಗರ ಕಾಲೇಜಿನಲ್ಲಿ ಪರೀಕ್ಷೆ ಕಟ್ಟಿ, ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದರು. ಇವರ ಮಗಳು ತೃಷಾ ಸುಳ್ಯದ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿ ಪರೀಕ್ಷೆ ಬರೆದು ಪಾಸಾಗಿದ್ದಾರೆ.
ಗೃಹ ರಕ್ಷಕ ದಳದ ಸಿಬ್ಬಂದಿಯಾಗಿರುವ ಇವರು,ಕೆಲಸಕ್ಕೆ ಮತ್ತು ಅಧ್ಯಯನಕ್ಕೆ ಯಾವುದೇ ರೀತಿಯಲ್ಲಿ ತೊಡಕಾಗದಂತೆ ನಿರ್ವಹಿಸಿದ್ದಾರೆ.ಬಿಡುವಿನ ಸಮಯದಲ್ಲಿ ನಿರಂತರ ಅಧ್ಯಯನ ನಡೆಸಿ ಈ ಸಾಧನೆ ಮಾಡಿದ್ದಾರೆ.ಉಪನ್ಯಾಸಕರೂ ಪುಸ್ತಕಗಳನ್ನು ನೀಡಿ ಉತ್ತೇಜನ ನೀಡಿದ್ದು, ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.ಬರೀ ಟಿವಿ ಮೊಬೈಲ್ ಅನ್ನುತ್ತಾ ಅಧ್ಯಯನದ ಕಡೆಗೆ ಒಲವು ಮೂಡಿಸದ ಕೆಲ ವಿದ್ಯಾರ್ಥಿಗಳಿಗೆ ಇವರು ಮಾದರಿಯಾಗಿದ್ದಾರೆ.ಅದರಲ್ಲೂ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು ವಿಶೇಷವೆಂಬಂತಿದೆ.