ನ್ಯೂಸ್ ನಾಟೌಟ್ : ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಇಲ್ಲಿನ ನೇಚರ್ ಕ್ಲಬ್ ಹಾಗೂ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ವಿಭಾಗಗಳ ವತಿಯಿಂದ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ 19 ನೇ ಏಪ್ರಿಲ್ 2023, ಬುಧವಾರದಂದು ಕೃಷಿ ಕ್ಷೇತ್ರ ಅಧ್ಯಯನ ಶಿಬಿರ ನಡೆಯಿತು.ಈ ವೇಳೆ ಕೃಷಿ ಕ್ಷೇತ್ರ ಅಧ್ಯಯನ ಪ್ರವಾಸ ಏರ್ಪಡಿಸಲಾಯಿತು. ಸುಳ್ಯ ಪರಿಸರದ ಹಲವು ಕೃಷಿ ಸಾಧಕರನ್ನು ಸಂದರ್ಶಿಸಲಾಯಿತು.ಕೃಷಿ ಕ್ಷೇತ್ರ ವೀಕ್ಷಿಸಿದ ಬಳಿಕ ಅಲ್ಲಿನ ವಿಶೇಷತೆಗಳನ್ನು ಅವರ ಕೃಷಿ ಸಾಧನೆಗಳನ್ನು ಪರಿಚಯಿಸಿ ಕೊಡಲಾಯಿತು.
ಕೃಷಿ ಕ್ಷೇತ್ರ ಅಧ್ಯಯನದಲ್ಲಿ ಮೊದಲನೆಯದಾಗಿ ಸಮಗ್ರ ಕೃಷಿಯಲ್ಲಿ ಜಿಲ್ಲಾ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪಡೆದ ಸುಳ್ಯ ತಾಲೂಕು ಐವರ್ನಾಡಿನ ಚಾತುಬಾಯಿ ನವೀನಚಂದ್ರ ರವರ ಬಹು ಅಪರೂಪದ ಮುತ್ತುಕೃಷಿ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಇಲ್ಲಿ ಸಿಹಿನೀರಿನ ಚಿಪ್ಪು ಜೀವಿಗಳನ್ನು ಬೆಳೆಸಿ ವಿವಿಧ ಆಕಾರಗಳಲ್ಲಿ ಮುತ್ತು ಪಡೆಯುವ ವಿಧಾನಗಳ ಬಗ್ಗೆ ಹಾಗೂ ಪ್ರಾರಂಭಿಸಲು ಬೇಕಾದ ಪರಿಕರಗಳು, ನಿರ್ವಹಿಸುವ ವಿಧಾನಗಳು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ಹಾಗೂ ಸರಾಸರಿ ಲಾಭಾಂಶದ ವಿವರಣೆ ಪಡೆದುಕೊಳ್ಳಲಾಯಿತು.
ಮಧ್ಯಾಹ್ನ ಎಡಮಂಗಲದ ಕೃಷಿ ಸಾಧಕಿ ತರಕಾರಿ ಬೆಳೆಯ ಮೂಲಕ ಆರ್ಥಿಕ ಯಶಸ್ಸು ಸಾಧಿಸಿ, ಸಮಾಜಸೇವೆ ಮಾಡುತ್ತಿರುವ ಕಮಲಕ್ಕ, ಜೀವಶಾಸ್ತ್ರ ಪದವಿ ನಂತರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಭವ್ಯ ಮತ್ತು ಅಳಿಯ ಯೋಗೀಶ್ ರನ್ನು ಭೇಟಿಯಾಗಿ ಅಲಸಂಡೆ, ಬಸಳೆ, ಬೆಂಡೆ, ಬದನೆ, ಹರಿವೆ, ತೊಂಡೆಕಾಯಿ, ಸೌತೆ ಇತ್ಯಾದಿ ತರಕಾರಿ ಬೆಳೆಯುವ ಬಗ್ಗೆ ಸವಿಸ್ತಾರವಾದ ಮಾಹಿತಿ ಪಡೆದುಕೊಳ್ಳಲಾಯಿತು.ಕಮಲಕ್ಕ ಹಿಂದೆ ಕಡು ಬಡತನ ಎದುರಿಸಿ ತನ್ನ ಕಾಯಕ ಪ್ರಯತ್ನದ ಮೂಲಕ ಶ್ರೀಮಂತರಾಗಿ ಬೆಳೆದ ಕಥೆ ವಿವರಿಸಿದರು.
ಅಪರಾಹ್ನ ಪಂಜ ಸಮೀಪದ ವನಸಿರಿ ಫಾರ್ಮ್ಸ್ ಮತ್ತು ಸಾನಿಕ ನರ್ಸರಿ ಮುನ್ನಡೆಸುತ್ತಿರುವ ಕೃಷಿಕ ದಯಪ್ರಸಾದ್ ಚೀಮುಳ್ಳು ಮತ್ತು ತುಳಸಿ ದಂಪತಿಯನ್ನು ಸಂದರ್ಶಿಸಿ ಇಲ್ಲಿ ಬೆಳೆಯುತ್ತಿರುವ ಬಹುವಿಧದ ದೇಶ- ವಿದೇಶಿ ಹಣ್ಣಿನ ಗಿಡಗಳು, ಅಲಂಕಾರಿಕ ಸಸ್ಯಗಳು, ಮನೆಯಂಗಳದಲ್ಲಿ ನಿರ್ಮಿಸಿದ ಪುಟ್ಟ ಉದ್ಯಾನವನ, ಗಿಡಗಳ ಆರೈಕೆಯಲ್ಲಿ ಕಾಳಜಿ, ಹನಿ ನೀರಾವರಿ ವ್ಯವಸ್ಥೆ ಇತ್ಯಾದಿ ವೀಕ್ಷಿಸಿ ವಿವರಣೆ ಪಡೆದುಕೊಳ್ಳಲಾಯಿತು. ಯುವಕರು ಹೇಗೆ ಕೃಷಿ ಮೂಲಕ ಯಶಸ್ವಿ ಜೀವನ ನಡೆಸಬಹುದು ಎಂಬ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಂಜೆ ಚೊಕ್ಕಾಡಿ ಸಮೀಪದ ಗೋವರ್ಧನ ಗೋ ವಿಹಾರ ಧಾಮ ಮತ್ತು ಶ್ರೀ ಶಣ್ಮುಖ ಗವ್ಯ ಇಂಡಸ್ಟ್ರಿ ಎಂಬ ಕಿರು ಉದ್ಯಮ ಮುನ್ನಡೆಸುತ್ತಿರುವ ಮಹಾಲಿಂಗೇಶ್ವರ ಭಟ್ ಇವರನ್ನು ಸಂದರ್ಶಿಸಲಾಯಿತು.ಇವರು ಮಲೆನಾಡು ಗಿಡ್ಡ ತಳಿಯ ದೇಶೀ ಹಸುಗಳ ಮಹತ್ವ ಮತ್ತು ಪ್ರಯೋಜನಗಳನ್ನು ತಿಳಿಸಿದರು. ಇಲ್ಲಿ ತಯಾರಿಸುತ್ತಿರುವ ಅಂಬಾ ಉತ್ಪನ್ನಗಳಾದ ಸಾವಯವ ಸೆಗಣಿ ಗೊಬ್ಬರ, ಗೋ ಅರ್ಕವನ್ನು ಉಪಯೋಗಿಸಿ ತಯಾರಿಸುತ್ತಿರುವ ಫಿನೈಲ್, ಮಲ್ಟಿ ಪರ್ಪಸ್ ಲಿಕ್ವಿಡ್ ಇತ್ಯಾದಿ ಉತ್ಪನ್ನಗಳ ಬಗ್ಗೆ ವಿವರಿಸಿದರು. ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಸಾವಯವ ಗೊಬ್ಬರ ಮತ್ತು ಜೀವಾಮೃತ ತಯಾರಿಕೆ ಬಗ್ಗೆ ಮಾಹಿತಿ ಕೊಟ್ಟರು.
ಅಧ್ಯಯನ ಪ್ರವಾಸದಲ್ಲಿ ಭೇಟಿ ನೀಡಿದ ಎಲ್ಲ ಕೃಷಿ ಸಾಧಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಶಿಬಿರದ ನೇತೃತ್ವ ವನ್ನು ಎನ್ನೆಂಸಿ ನೇಚರ್ ಕ್ಲಬ್ ಸಂಚಾಲಕ ಕುಲದೀಪ್ ಪೆಲ್ತಡ್ಕ ಹಾಗೂ ಉಪನ್ಯಾಸಕರಾದ ಭವ್ಯ ಪಿ. ಎಮ್, ಕೃತಿಕಾ ಕೆ. ಜೆ ಮತ್ತು ಅಜಿತ್ ಕುಮಾರ್ ಎಸ್. ಬಿ ವಹಿಸಿದ್ದರು. ಕಾಲೇಜು ಸಿಬ್ಬಂದಿ ಭವ್ಯ ಮತ್ತು ಚಂದ್ರಶೇಖರ್ ಸಹಕರಿಸಿದರು.