ನ್ಯೂಸ್ ನಾಟೌಟ್: ಚುನಾವಣಾ ಸಂದರ್ಭದಲ್ಲಿ ವಿವಿಧ ರೀತಿಯ ನಾಟಕಗಳು ನಡೆಯುತ್ತಲೇ ಇರುತ್ತದೆ. ಅಂತಹ ನಾಟಕಗಳ ಪೈಕಿ ಇದೀಗ ಕಾಂಗ್ರೆಸ್ ನಾಯಕರ ಬಹಿರಂಗ ಜಗಳದ ಪ್ರಸಂಗವೂ ಸೇರಿಕೊಂಡಿದೆ. ಪಂಜದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರೊಬ್ಬರು ಮನೆಗೆ ಬಂದಿದ್ದ ಕಾಂಗ್ರೆಸ್ ಅಭ್ಯರ್ಥಿಯನ್ನು ದೊಣ್ಣೆ ತೋರಿಸಿ ಓಡಿಸಿದ್ದಾರೆ ಎನ್ನುವ ವೈರಲ್ ಸುದ್ದಿಯೊಂದು ಹೊರಬಿದ್ದಿದೆ. ಇದಕ್ಕೆ ಸಂಬಂಧಪಟ್ಟ ಖಚಿತ ಮಾಹಿತಿ ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.
ಪಂಜದ ಕಾಂಗ್ರೆಸ್ ನಾಯಕರೊಬ್ಬರ ಮನೆಗೆ ಸುಳ್ಯದ ಕಾಂಗ್ರೆಸ್ ಅಭ್ಯರ್ಥಿ ತೆರಳಿದ್ದಾರೆ. ಈ ವೇಳೆ ಬೆಂಗಳೂರು ಶೈಲಿಯಲ್ಲಿ ಕಾಂಗ್ರೆಸ್ ನಾಯಕ ಮಾತನಾಡಿದ್ದಾರೆ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಸ್ಥಳೀಯ ಕಾಂಗ್ರೆಸ್ ನಾಯಕ ದೊಣ್ಣೆ ತೋರಿಸಿ ಮನೆಯಿಂದ ಹೊರ ಹೋಗುವಂತೆ ಸೂಚಿಸಿದ್ದಾರೆ. ಅಪಾಯದ ಮುನ್ಸೂಚನೆಯನ್ನು ಅರಿತ ಸುಳ್ಯದ ಕಾಂಗ್ರೆಸ್ ನಾಯಕ ಅಲ್ಲಿಂದ ಚಪ್ಪಲಿ ಬಿಟ್ಟು ಓಡಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಇದೀಗ ಕಾಂಗ್ರೆಸ್ ಪಕ್ಷದೊಳಗೆ ಗುಸುಗುಸು ಹರಡುತ್ತಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸರಿಯಾಗಿ ಕಾರ್ಯಕರ್ತರ ಜತೆಗೆ ನಡೆದುಕೊಳ್ಳುತ್ತಿಲ್ಲ ಅನ್ನುವ ಆರೋಪವೂ ಕೇಳಿ ಬಂದಿದೆ. ಕಾಂಗ್ರೆಸ್ ಪಕ್ಷ ಸ್ಥಳೀಯರಿಗೆ ಮಣೆ ಹಾಕುವುದು ಬಿಟ್ಟು ಸುಳ್ಯಕ್ಕೆ ಆಮದು ಮಾಡಿದ ಅಭ್ಯರ್ಥಿಯನ್ನು ಹಾಕಿದ್ದಾರೆ ಅನ್ನುವ ಆಕ್ರೋಶವೂ ಸ್ವತಃ ಕಾಂಗ್ರೆಸ್ ಪಕ್ಷದಿಂದ ಕೇಳಿ ಬಂದಿದೆ. ಇದೆಲ್ಲದರ ನಡುವೆ ಘಟನೆಯ ಕೇಂದ್ರ ಬಿಂದುವಾಗಿರುವ ಅಭ್ಯರ್ಥಿಯನ್ನು ಮಾತನಾಡಿಸುವ ಪ್ರಯತ್ನವನ್ನು ನ್ಯೂಸ್ ನಾಟೌಟ್ ನಡೆಸಿತಾದರೂ ಸಾಧ್ಯವಾಗಲಿಲ್ಲ.