ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ತಾಯಿ ಪಕ್ಕದಲ್ಲಿ ಮಲಗಿದ್ದ ಎಂಟು ದಿನಗಳ ಹಸುಗೂಸು ಕಳವು ಪ್ರಕರಣ ಕೊನೆಗೆ ಸುಖಾಂತ್ಯ ಕಂಡಿದ್ದು, ವಿ.ವಿ.ಪುರಂ ಪೊಲೀಸರು ಮಗುವನ್ನು ತಾಯಿ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗು ಕಳವು ಮಾಡಿದ್ದ ರಾಮನಗರ ಮೂಲದ ದಿವ್ಯಾರಶ್ಮಿ (29) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಏ.15ರಂದು ತುಮಕೂರು ಜಿಲ್ಲೆಯ ತಿಪಟೂರಿನ ಕಾರ್ಮಿಕ ಪ್ರಸನ್ನ ಹಾಗೂ ಸುಮಾ ದಂಪತಿಯ ಮಗುವನ್ನು ದಿವ್ಯಾರಶ್ಮಿ ಕಳವು ಮಾಡಿದ್ದಳು. ರಾಮನಗರದ ಜಿಲ್ಲೆ ಮಾಗಡಿ ತಾಲೂಕಿನ ಐಜೂರಿನ ನಿವಾಸಿ ಆರೋಪಿ ದಿವ್ಯಾರಶ್ಮಿ ಪತಿ ಒಂದು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಜತೆಗೆ, ಕೆಲ ತಿಂಗಳ ಹಿಂದಷ್ಟೇ ಗರ್ಭಪಾತವಾಗಿ ಮಗು ಕೂಡ ಮೃತಪಟ್ಟಿತ್ತು. ಹೀಗಾಗಿ ಮಗುವಿನ ಹಂಬಲದಲ್ಲಿದ್ದ ದಿವ್ಯಾರಶ್ಮಿ ಮಗು ಕಳವು ಮಾಡಲು ತೀರ್ಮಾನಿಸಿದ್ದಳು.
ಹೀಗಾಗಿ ಏ.14ರಂದು ಈಕೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯರ ಸಂಬಂಧಿಕರ ಸೋಗಿನಲ್ಲಿ ಬೆಳಗ್ಗೆ ಒಳಗಡೆ ಬಂದಿದ್ದಳು. ಆದರೆ, ಹೊರಗಡೆ ಹೋಗಿರಲಿಲ್ಲ. ಏ.15ರಂದು ಮುಂಜಾನೆ ತಾಯಿ, ಮಗು ವಾರ್ಡ್ ನಲ್ಲಿ ಎಲ್ಲರೂ ಮಲಗಿದ್ದ ವೇಳೆ ಸುಮಾ ಪಕ್ಕದಲ್ಲಿದ್ದ ಮಗುವನ್ನು ತೆಗೆದುಕೊಂಡು ಬ್ಯಾಗ್ ನಲ್ಲಿ ಇರಿಸಿಕೊಂಡು ಹೊರಹೋಗಿದ್ದಳು.
ಬಸ್ ಮೂಲಕ ಐಜೂರು ತಲುಪಿದ್ದಳು ಎಂಬುದು ಆಸ್ಪತ್ರೆ ಆವರಣ ಹಾಗೂ ಹೊರಗಡೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಯಲ್ಲಿ ಪತ್ತೆಯಾಗಿತ್ತು. ಗಂಡ ಮೃತಪಟ್ಟ ಬಳಿಕ ದಿವ್ಯಾ ಒಬ್ಬಳೇ ವಾಸಿಸುತ್ತಿದ್ದು, ತನ್ನದೇ ಮಗು ಎಂದು ಅಕ್ಕ-ಪಕ್ಕದ ಮನೆಯವರಿಗೆ ಹೇಳಿಕೊಂಡಿದ್ದಳು. ಅಲ್ಲದೆ, ಮಗುವಿಗೆ ತಾನೇ ಹಾಲುಣಿಸಿ ಆರೈಕೆ ಮಾಡುತ್ತಿದ್ದಳು. ಮಗು ಸಾಕುವ ಉದ್ದೇಶಕ್ಕಾಗಿಯೇ ಕಳವು ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.