ನ್ಯೂಸ್ ನಾಟೌಟ್: ರಾಜ್ಯ ರಾಜಧಾನಿ ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಕಳ್ಳತನ ಮಾಡಿದ್ದಾನೆಂದು ಒಂದು ವಾರಗಳ ಕಾಲ ವ್ಯಕ್ತಿಯೊಬ್ಬನನ್ನು ರೂಮಲ್ಲಿ ಕೂಡಿಟ್ಟು ಗುಂಪೊಂದು ಹಲ್ಲೆ ಮಾಡಿದೆ. ಕೊನೆಗೆ ಕಿರುಕುಳ ಸಹಿಸದೇ ಆ ವ್ಯಕ್ತಿ ರೂಮಿನಲ್ಲೇ ಪ್ರಾಣ ಬಿಟ್ಟಿದ್ದಾನೆ. ಈ ಅಮಾನವೀಯ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ. ಮೃತ ವ್ಯಕ್ತಿ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ.
ಮಾರ್ಚ್ 4ಕ್ಕೆ ರಾಮಮೂರ್ತಿನಗರ ಸಾದಹಳ್ಳಿ ಬ್ರಿಡ್ಜ್ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹದ ಫೋಟೋವನ್ನು ರಾಜ್ಯದ ಎಲ್ಲಾ ಠಾಣೆಗೆ ಕಳುಹಿಸಿ ಪೊಲೀಸರು ತನಿಖೆಗೆ ಇಳಿದಿದ್ದರು. ಎಷ್ಟೇ ಪ್ರಯತ್ನ ಪಟ್ಟರು ಮೃತನ ಸುಳಿವು ಮಾತ್ರ ಸಿಗಲೇ ಇಲ್ಲ. ನಂತರ ಮಾರ್ಚ್ 6 ಕ್ಕೆ ಮಹಿಳೆಯೊಬ್ಬಳು ತನ್ನ ಮಗ ಕಾಣೆಯಾಗಿದ್ದಾನೆಂದು ಕೆಜಿ ಹಳ್ಳಿ ಠಾಣೆಗೆ ದೂರು ನೀಡಿದ್ದರು. ಕೆಜಿ ಹಳ್ಳಿಯ ಮುಸ್ಲಿಂ ಕಾಲೋನಿ ನಿವಾಸಿ ಮಹಿಳೆಗೆ ರಾಮಮೂರ್ತಿ ನಗರದಲ್ಲಿ ಸಿಕ್ಕ ಮೃತದೇಹ ತೋರಿಸಲಾಗುತ್ತೆ. ಇದು ತನ್ನದೇ ಮಗ ಎಂದು ಮಹಿಳೆ ಗುರುತಿಸಿದ್ದು ಮೃತ ವ್ಯಕ್ತಿ ಯಾರೆಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಅದೇ ಸಮಯದಲ್ಲಿ ಆರೋಪಿ ಜಬೀ ಎಂಬಾತ ಸೈಫುಲ್ಲಾ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಿದ್ದ. ಇದೇ ಅನುಮಾನದ ಮೇಲೆ ಜಬೀ ಎಂಬಾತನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.ಆಗ ಕೊಲೆಯ ರಹಸ್ಯ ಬಯಲಾಗಿದೆ. ಮೊಬೈಲ್ ಪರಿಶೀಲನೆ ವೇಳೆ ಭಯಾನಕ ವಿಡಿಯೋ ಲಭ್ಯವಾಗಿದೆ. ಮೃತನನ್ನು ಕಟ್ಟಿ ಹಾಕಿ ಹಲ್ಲೆ ಮಾಡಿರುವ ವಿಡಿಯೋ ಸಿಕ್ಕಿದೆ. ಜಬೀ ಮಾಹಿತಿ ಮೇರೆಗೆ ಪ್ರಶಾಂತ್, ಬಬನ್ ನನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಜಬಿ ಮೃತನ ತಾಯಿ ಜೊತೆಗೆ ಸೇರಿ ತಾನೂ ವ್ಯಕ್ತಿಯನ್ನು ಹುಡುಕುವ ನಾಟಕ ಮಾಡಿದ್ದ.
ಪ್ರಶಾಂತ್ ಕೆಜಿ ಹಳ್ಳಿಯಲ್ಲಿ ಸ್ಕ್ರಾಪ್ ಅಂಗಡಿ ಇಟ್ಟುಕೊಂಡಿದ್ದ. ಅವನ ಅಂಗಡಿಯಿಂದ ವಸ್ತುಗಳು ಆಗಾಗ ಕಳ್ಳತನವಾಗುತ್ತಿತ್ತು. ಹೀಗಾಗಿ ಮಾಲೀಕ ಪ್ರಶಾಂತ್ ಕಳ್ಳನನ್ನ ಹಿಡಿಯಲು ರಾತ್ರಿ ಅಡಗಿ ಕುಳಿತಿದ್ದ. ಈ ವೇಳೆ ಪ್ರಶಾಂತ್ ಅಂಗಡಿಗೆ ಮೃತ ಸೈಫುಲ್ಲಾ ಬಂದಿದ್ದಾನೆ. ಆಗ ಪ್ರಶಾಂತ್ ಅಂಡ್ ಟೀಂ ಸೈಫುಲ್ಲಾನನ್ನು ಹಿಡ್ಕೊಂಡಿದ್ದಾರೆ. ಕಟ್ಟಡ ಮಾಲೀಕ ಜಬಿಗೆ ಪ್ರಶಾಂತ್ ಈ ವಿಚಾರ ಮುಟ್ಟಿಸಿದ್ದಾನೆ. ತನ್ನ ಪಟಾಲಂನ ಜೊತೆಗೆ ಆಗಮಿಸಿದ್ದ ಜಬಿ, ಸೈಫುಲ್ಲಾನನ್ನ ರೂಂ ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾನೆ. ಇದೀಗ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಶಾಂತ್ , ಶೇಖ್ ಜಬೀವುಲ್ಲಾ ಹಾಗೂ ಶಾಬಾಜ್ ಅಲಿಯಾಸ್ ಬಬನ್ ಬಂಧಿತರು.