ನ್ಯೂಸ್ ನಾಟೌಟ್ : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷ ಹಾಗೂ ವಕೀಲ ಪಿ.ಕೃಷ್ಣಮೂರ್ತಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ಬುಧವಾರ ರಾತ್ರಿ 11.30 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಘಟನೆಯಿಂದ ಕೃಷ್ಣಮೂರ್ತಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಿ.ಕೃಷ್ಣಮೂರ್ತಿ ಅವರು ಕುಶಾಲನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಡಿಕೇರಿಯ ನಿವಾಸಕ್ಕೆ ಆಗಮಿಸುತ್ತಿದ್ದಾಗ ಈ ಘಟನೆ ನಡೆದಿದೆ. ಹೆಚ್ಚು ಕಡಿಮೆ ಚೆಟ್ಟಳ್ಳಿ ಸಮೀಪಿಸುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ. ಕಾರಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಗಿಡಗಳ ಮರೆಯಿಂದ ಆರೋಪಿ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದ್ದು,ಚೆಟ್ಟಳ್ಳಿ ಗ್ರಾ.ಪಂ ಸದಸ್ಯ ಹಾಗೂ ವಕೀಲ ಬಲ್ಲಾರಂಡ ಕಂಠಿ ಕಾರ್ಯಪ್ಪ ಅವರನ್ನು ಚೆಟ್ಟಳ್ಳಿಯ ನಿವಾಸಕ್ಕೆ ಬಿಟ್ಟು ಮಡಿಕೇರಿ ಕಡೆಗೆ ಪ್ರಯಾಣ ಬೆಳೆಸಿದಾಗ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.