ನ್ಯೂಸ್ ನಾಟೌಟ್ : ಚೀನದಲ್ಲಿ 11 ವರ್ಷದ ಬಾಲಕನೊಬ್ಬ ವಿಚಿತ್ರ ರೀತಿಯಲ್ಲಿ ತನ್ನ ಮನಸ್ಥಾಪವನ್ನು ಸೋರಿಸಿದ್ದಾನೆ, ಎಲ್ಲರೂ ತಮ್ಮ ಬಾಲ್ಯದಲ್ಲಿ ಅಪ್ಪ- ಅಮ್ಮ ಬೈದಾಗ ಬೇಸರಿಸಿಕೊಂಡು ದಿಢೀರನೆ ಏನೋ ನಿರ್ಧಾರ ತೆಗೆದುಕೊಂಡು ಸ್ವಲ್ಪ ಹೊತ್ತು ಕೋಪಿಸಿಕೊಂಡರೂ ಆ ಬಳಿಕ ಸರಿಯಾಗಿ ರಾಜಿಯಾಗುವುದು ಸಹಜ.
ಆದರೆ ಇಲ್ಲೊಬ್ಬ ಬಾಲಕ ತನ್ನ ಅಮ್ಮನ ಬಳಿ ಮನೆಯಲ್ಲಿ ಯಾವುದೋ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಕ್ಕೆ ಮಗನ ಮೇಲೆ ಅಮ್ಮ ಸಿಟ್ಟಾಗಿದ್ದಾರೆ. ಇದೇ ಸಿಟ್ಟಿನಲ್ಲಿ ಮಗ ಅಮ್ಮನ ಬಗ್ಗೆ ದೂರು ಹೇಳಲು ಅಜ್ಜಿ ಮನೆಗೆ ಹೊರಟ್ಟಿದ್ದಾನೆ. ಆತನ ಅಜ್ಜಿ ಮನೆ ಇರುವುದು 130 ಕಿ.ಮೀ ದೂರದಲ್ಲಿರುವ ಝೆಜಿಯಾಂಗ್ನ ಕೌಂಟಿಯಾದ ಮೀಜಿಯಾಂಗ್ ಎಂಬ ಚೀನಾದ ಒಂದು ಹಳ್ಳಿಯಲ್ಲಿ. ಆದರೆ 11 ವರ್ಷದ ಈ ಬಾಲಕ ಅಮ್ಮನ ವಿರುದ್ದ ದೂರನ್ನು ಹೇಳಲು ತನ್ನ ಸೈಕಲ್ ತುಳಿದುಕೊಂಡು ಸತತ 130 ಕಿ.ಮೀ ಪ್ರಯಾಣಿಸಿದ್ದಾನೆ.
ದೂರದ ಅಜ್ಜಿ ಮನೆಗೆ ಹೋಗಲು ಈತನಿಗೆ ಸರಿಯಾದ ದಾರಿಯೂ ಗೊತ್ತಿಲ್ಲ. ರಸ್ತೆಯಲ್ಲಿನ ಊರಿನ ಹೆಸರಿನ ಸೂಚನಾ ಫಲಕವನ್ನು ನೋಡಿ ಹೋಗಿದ್ದಾನೆ. ಈ ವೇಳೆ ಒಮ್ಮೆ ತಪ್ಪು ಮಾರ್ಗದಲ್ಲಿ ಸಾಗಿದ್ದು, ಮನೆಯಿಂದ ತಂದಿದ್ದ ಬ್ರೆಡ್ , ನೀರನ್ನು ಕುಡಿದು ರಾತ್ರಿಯೂ ಪಯಣ ಬೆಳೆಸಿದ್ದಾನೆ.
ಪೊಲೀಸರು ಈತನನ್ನು ಪತ್ತೆ ಹಚ್ಚಿ ಹತ್ತಿರದ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಆ ಬಳಿಕ ಆತನನ್ನು ವಿಚಾರಿಸಿದಾಗ ಪೊಲೀಸರಿಗೂ ಆತ ಸೈಕಲ್ ನಲ್ಲಿ ಅಮ್ಮನ ವಿರುದ್ಧ ಅಜ್ಜಿಗೆ ದೂರು ಹೇಳಲು ಬಂದಿದ್ದಾನೆ ಎನ್ನುವುದನ್ನು ಕೇಳಿ ಅಚ್ಚರಿ ಆಗಿದೆ.
ಸಂಜೆಯ ವೇಳೆಗೆ ಪೊಲೀಸರು ಠಾಣೆಗೆ ಬಾಲಕನ ತಾಯಿ ಹಾಗೂ ಅಜ್ಜಿಯನ್ನು ಕರೆದಿದ್ದಾರೆ.ಈ ಬಗ್ಗೆ ಮಾತನಾಡುವ ಬಾಲಕನ ತಾಯಿ, ಆತ ನನ್ನ ಬಳಿ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಬೆದರಿಸುತ್ತಿದ್ದ, ಆತ ಸುಮ್ಮನೆ ಹೇಳುತ್ತಿದ್ದಾನೆ ಅಂದುಕೊಂಡಿದ್ದೆ. ಆದರೆ ಈತ ಹೀಗೆ ಮಾಡುತ್ತಾನೆ ಅಂದುಕೊಂಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮಗುವನ್ನು ಸಮಾದಾನ ಪಡಿಸಿ ಅಮ್ಮನ ಜೊತೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.