ನ್ಯೂಸ್ ನಾಟೌಟ್: ಕೆರೆಗೆ ಬಿದ್ದು ತಾಯಿ ಆನೆಯಿಂದ ದೂರವಾಗಿದ್ದ ಮರಿ ಆನೆಯನ್ನು ಕೊಡಗಿನ ಆನೆ ಶಿಬಿರ ದುಬಾರೆಗೆ ಶಿಫ್ಟ್ ಮಾಡಲು ಅರಣ್ಯಾಧಿಕಾರಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ತಾಯಿ ಆನೆಯ ಜತೆ ಸೇರಿಸಲು ಮತ್ತೆ ಪ್ರಯತ್ನ ನಡೆಸಲಾಯಿತು. ಕಳೆದ ಎರಡು ದಿನಗಳಿಂದ ನಿರಂತರ ಯತ್ನ ನಡೆಸಿದರೂ ತಾಯಿ ಆನೆ ಮರಿ ಆನೆಯನ್ನು ಹುಡುಕಿಕೊಂಡು ಬರಲಿಲ್ಲ.
ಅಂತಿಮವಾಗಿ ಮರಿ ಆನೆಯನ್ನು ದುಬಾರೆಗೆ ಕಳುಹಿಸಿಕೊಡುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಅಜ್ಜಾವರದ ಕೆರೆಯೊಂದರಲ್ಲಿ ನಾಲ್ಕು ಆನೆಗಳು ಬಿದ್ದಿದ್ದವು. ಊರವರ ಹಾಗೂ ಅರಣ್ಯಾಧಿಕಾರಿಗಳ ಸಹಕಾರದಿಂದ ಆನೆಗಳನ್ನು ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿತ್ತು. ಆದರೆ ಮೂರು ತಿಂಗಳ ಮರಿ ಆನೆ ಕೆರೆಯಲ್ಲಿ ಬಾಕಿ ಆಗಿತ್ತು. ತಾಯಿ ಆನೆ ಮರಿ ಆನೆಯನ್ನು ತನ್ನ ಜತೆ ಸೇರಿಸಿಕೊಳ್ಳಲೇ ಇಲ್ಲ.
ಮರಿ ಆನೆಯನ್ನು ತಾಯಿ ಆನೆ ಜತೆ ಸೇರಿಸಿಕೊಳ್ಳುವ ಎಲ್ಲ ಪ್ರಯತ್ನ ವಿಫಲವಾಗಿತ್ತು. ಅಂತಿಮವಾಗಿ ಮರಿ ಆನೆಯನ್ನು ದುಬಾರೆಗೆ ಕಳುಹಿಸಿಕೊಡುವ ನಿರ್ಧಾರ ತೆಗೆದುಕೊಳ್ಳಲಾಯಿತು.