ನ್ಯೂಸ್ ನಾಟೌಟ್: ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಹಲವು ವರ್ಷಗಳ ನಂಟಿದೆ. ಮನುಷ್ಯನ ಅತಿಯಾಸೆಗೆ, ಸ್ವಾರ್ಥಕ್ಕೆ ಅರಣ್ಯ ನಾಶವಾದ ಹಲವು ಉದಾಹರಣೆಯನ್ನು ನೋಡಿದ್ದೇವೆ. ಇದರಿಂದ ಕಾಡಿನಲ್ಲಿ ಆಹಾರ ಸಿಗದೆ ಪ್ರಾಣಿಗಳು ನಾಡಿಗೆ ಬಂದು ಕೃಷಿ ಸಂಪತ್ತನ್ನು ನಾಶ ಮಾಡುತ್ತಿವೆ. ಹಾಗೆ ಕಾಡಿಗೆ ಬಂದ ಆನೆ ಮರಿಯೊಂದು ಇದೀಗ ತಾಯಿಯಿಂದ ಬೇರ್ಪಟ್ಟು ರಸ್ತೆಯಲ್ಲೆಲ್ಲ ಓಡಾಡುತ್ತಿದೆ. ಇದರ ಹಿಂದೆಯೇ ಅರಣ್ಯ ಇಲಾಖೆಯವರು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ತಾಯಿ ಇಲ್ಲದ ತಬ್ಬಲಿ ಮೂರು ತಿಂಗಳ ಮರಿ ಆನೆಗೆ ಈಗ ಮನುಷ್ಯನೇ ಅಪ್ಪ-ಅಮ್ಮ…
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಎರಡು ದಿನಗಳ ಹಿಂದೆ ಆಹಾರ ಅರಸುತ್ತಾ ಬಂದಿದ್ದ ಕಾಡಾನೆಗಳ ಗುಂಪೊಂದು ಆಯ ತಪ್ಪಿ ಕೆರೆಗೆ ಬಿದ್ದಿದ್ದವು. ಕೆರೆಗೆ ಬಿದ್ದ ನಾಲ್ಕು ಆನೆಗಳ ಪೈಕಿ ಎರಡು ದೊಡ್ಡ ಆನೆ ಹಾಗೂ ಇನ್ನೆರಡು ಮರಿ ಆನೆಗಳಾಗಿದ್ದವು. ಅದರಲ್ಲಿ ಒಂದು ಮರಿ ಆನೆಗೆ ಒಂದು ವರ್ಷವಾಗಿದ್ದರೆ ಮತ್ತೊಂದು ಆನೆ ಮರಿಗೆ ಕೇವಲ ಮೂರು ತಿಂಗಳಾಗಿತ್ತು. ನಾಲ್ಕು ಆನೆಗಳ ಪೈಕಿ ಮೂರು ಆನೆಗಳನ್ನು ನೀರಿನಿಂದ ಹರಸಾಹಸ ಮಾಡಿ ಊರಿನವರು ಮೇಲಕ್ಕೆತ್ತಿದ್ದರು. ಅಂತಿಮವಾಗಿ ಮೂರು ತಿಂಗಳ ಆನೆ ಮಾತ್ರ ನೀರಿನಲ್ಲಿ ಬಾಕಿ ಆಗಿತ್ತು. ಆ ಆನೆ ಮರಿಯನ್ನು ಕಷ್ಟಪಟ್ಟು ನೀರಿನಿಂದ ಮೇಲೆಕ್ಕೆ ಎತ್ತಲಾಯಿತು.
ಈ ವೇಳೆ ಆ ಆನೆ ಮರಿಯನ್ನು ಮನುಷ್ಯರು ಮುಟ್ಟಿರುವ ಕಾರಣಕ್ಕೆ ತಾಯಿ ಆನೆ ಸೇರಿಸಿಕೊಳ್ಳಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಮರಿ ಆನೆ ಈಗ ಒಂಟಿಯಾಗಿದೆ. ತಾಯಿ ಜತೆಗಿಲ್ಲ. ತನ್ನ ಗುಂಪಿನವರೂ ಜತೆಗಿಲ್ಲ. ಮನುಷ್ಯರನ್ನು ಕಂಡರೆ ಇವರೇ ನನ್ನ ತಂದೆ-ತಾಯಿ ಅನ್ನುವಂತೆ ಮರಿ ಆನೆ ಅವರನ್ನು ಹಿಂಬಾಲಿಸುತ್ತಿದೆ. ಆಟವಾಡುವುದಕ್ಕೆ ಪ್ರಯತ್ನಿಸುತ್ತಿದೆ. ಮುದ್ದು ಮನಸ್ಸಿನ ಪುಟಾಣಿ ಆನೆ ಮರಿ ಈಗ ಅರಣ್ಯ ಸಿಬ್ಬಂದಿಯ ಲಾಲನೆ-ಪಾಲನೆಯಲ್ಲಿದೆ. ಸದ್ಯ ತಾಯಿ ಜತೆ ಸೇರಿಸುವ ಪ್ರಯತ್ನವನ್ನು ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿದ್ದಾರೆ. ಸಾಧ್ಯವಾಗದೆ ಹೋದರೆ ಆನೆ ಮರಿಯನ್ನು ದುಬಾರೆ ಅಥವಾ ಆನೆ ಸಂರಕ್ಷಣಾ ಸ್ಥಳಕ್ಕೆ ರವಾನಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.