ನ್ಯೂಸ್ ನಾಟೌಟ್: ರಾಜಸ್ಥಾನದ ಯುವಕನೊಬ್ಬ ಬ್ಲೇಡ್ ಗಳನ್ನ ನುಂಗಿದ್ದಾನೆ, ಒಂದಲ್ಲ ಎರಡಲ್ಲ ಏಕಕಾಲಕ್ಕೆ 56 ಬ್ಲೇಡ್ ಗಳನ್ನ ನುಂಗಿ ಶಾಕ್ ನೀಡಿದ್ದಾನೆ. ರಾಜಸ್ಥಾನದ ಜಲೋರ್ ಜಿಲ್ಲೆಯ ಯಶ್ ಪಾಲ್ ಎಂಬ 26 ವರ್ಷದ ಯುವಕ 56 ಬ್ಲೇಡ್ಗಳಿದ್ದ ಪ್ಯಾಕೆಟ್ ಅನ್ನು ನುಂಗಿದ ವ್ಯಕ್ತಿ.
ಯುವಕ ತಿಳಿದು ನುಂಗಿದ್ದಾನೋ ಅಥವಾ ತಿಳಿಯದೇ ನುಂಗಿದ್ದಾನೋ ಎಂದು ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಯಶ್ ಪಾಲ್ ಯುವಕ ಒಂದು ದಿನ ರಕ್ತವಾಂತಿ ಮಾಡಿಕೊಂಡಿದ್ದಾನೆ. ಇದರಿಂದ ಗಾಬರಿಗೊಂಡ ಸ್ನೇಹಿತರು ಕೂಡಲೇ ಯುವಕನನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ದಂಗಾಗಿ ಹೋಗಿದ್ದಾರೆ. ಪರೀಕ್ಷಿಸಿದಾಗ ಯುವಕನ ಹೊಟ್ಟೆಯೊಳಗೆ ಬ್ಲೇಡ್ ಗಳಿರುವುದು ಪತ್ತೆಯಾಗಿದೆ.
ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದ 26 ವರ್ಷದ ಯಶ್ ಪಾಲ್ ಖಾಸಗಿ ಕಂಪನಿಯೊಂದರಲ್ಲಿ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾನೆ. ಯಶ್ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಲಾಜಿ ನಗರದಲ್ಲಿ ಬಾಡಿಗೆ ರೂಮ್ ನಲ್ಲಿ ವಾಸವಿದ್ದ. ಸ್ನೇಹಿತರೆಲ್ಲರೂ ತಮ್ಮ ತಮ್ಮ ಕೆಲಸಕ್ಕಾಗಿ ತೆರಳಿದ್ದಾಗ ಯಶ್ ರೂಮ್ ನಲ್ಲಿ ರಕ್ತವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾನೆ. ಸ್ನೇಹಿತರು ಈತನನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಕ್ಯಾನಿಂಗ್ ನಲ್ಲಿ ಯಶ್ ಹೊಟ್ಟೆಯಲ್ಲಿ ಲೋಹದ ವಸ್ತಗಳಿರುವುದು ಪತ್ತೆಯಾಗಿದೆ. ವೈದ್ಯರು ಸೋನೋಗ್ರಫಿ ಮತ್ತು ಎಂಡೋಸ್ಕೋಪಿ ಮಾಡಿ, ಯಶ್ ಹೊಟ್ಟೆಯಲ್ಲಿ ಬ್ಲೇಡ್ಗಳಿರುವುದನ್ನು ಧೃಡಪಡಿಸಿದ್ದಾರೆ.
ತಕ್ಷಣ ಆಪರೇಷನ್ ಗೆ ಒಪ್ಪಿಗೆ ಸೂಚಿಸಿ ಶಸ್ತ್ರ ಚಿಕಿತ್ಸೆ ನಡೆಸಿ ಯಶ್ ಪಾಲ್ ಹೊಟ್ಟೆಯಿಂದ ಒಂದಲ್ಲ,ಎರಡಲ್ಲ ಬರೋಬ್ಬರಿ 56 ಬ್ಲೇಡ್ ತುಂಡುಗಳನ್ನ ಹೊರತೆಗೆದಿದ್ದಾರೆ. ಈತ ಪೇಪರ್ ಕವರ್ಗಳ ಸಮೇತ ಬ್ಲೆಡ್ ನುಂಗಿದ್ದು, ಪ್ರಾರಂಭದಲ್ಲಿ ಆತನಿಗೆ ಗೊತ್ತಾಗಲಿಲ್ಲ. ಹೊಟ್ಟೆಯೊಳಗೆ ಪೇಪರ್ ಕರಗಿದಂತೆ, ಅದು ಹಾನಿಯನ್ನುಂಟುಮಾಡಲು ಪ್ರಾರಂಭಿಸಿದೆ. ನಂತರ ನೋವು, ವಾಕರಿಕೆ ಪ್ರಾರಂಭವಾಗಿದೆ. ಆತ ಬ್ಲೇಡ್ಗಳನ್ನು ತಿನ್ನುವ ಮೊದಲು ಎರಡು ಭಾಗಗಳಾಗಿ ಮುರಿದು ತಿಂದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.