ನ್ಯೂಸ್ ನಾಟೌಟ್ : ರೈಲು ಹತ್ತುವ ಸಂದರ್ಭದಲ್ಲಿ ವ್ಯಾನಿಟಿ ಬ್ಯಾಗ್ ವೊಂದರಿಂದ ಸುಮಾರು 4 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಕಳ್ಳರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಚಿನ್ನಾಭರಣ ಕಳವುಗೈದ ಇಬ್ಬರು ಮಹಿಳೆಯರನ್ನು ಮಣಿಪಾಲ ಪೋಲಿಸರು ಬಂಧಿಸಿದ್ದಾರೆ.
ನಿನ್ನೆ ದಿನ ಪುನೀತ್ ವಸಂತ್ ಹೆಗ್ಡೆ ಎಂಬವರು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕುಟುಂಬದವರೊಂದಿಗೆ ಮಂಗಳೂರು – ಮುಂಬಯಿ ನಡುವೆ ಸಂಚರಿಸುವ ರೈಲು ಹತ್ತಿದ್ದರು. ಈ ವೇಳೆ ಬಂಗಾರದ ಒಡವೆಗಳನ್ನು ವ್ಯಾನಿಟಿ ಬ್ಯಾಗ್ ನಲ್ಲಿ ಬಟ್ಟೆಯಲ್ಲಿ ಕಟ್ಟಿ ಇಟ್ಟಿದ್ದರು. ಇಂದ್ರಾಳಿ ರೈಲು ನಿಲ್ದಾಣದಿಂದ ರೈಲು ಹೊರಟಾಗ ವ್ಯಾನಿಟಿ ಬ್ಯಾಗ್ ನ ಜಿಪ್ ತೆರೆದಿರುವುದು ಪುನೀತ್ ಅವರ ಗಮನಕ್ಕೆ ಬಂದಿತ್ತು. ಬ್ಯಾಗ್ ನ ಒಳಗಿದ್ದ ಚಿನ್ನಾಭರಣಗಳ ಕವರ್ ಕೂಡಾ ಕಾಣೆಯಾಗಿತ್ತು. ಮಣಿಪಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ದಾಖಲಾದ ತಕ್ಷಣ ಆರೋಪಿಯ ಪತ್ತೆ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿತು. ಪಿಎಸ್ಐ ನವೀನ್ ನಾಯ್ಕ, ಎ.ಎಸ್.ಐ ಶೈಲೇಶ್, ಹೆಚ್ ಸಿ, ಇಮ್ರಾನ್, ಶುಭ, ಅರಣ ಚಾಳೇಕರ್ ತಂಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಸಿಸಿಟಿವಿ ದ್ರಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಮಾಹಿತಿ ಪಡೆದರು. ಅದರ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿ ಘಟನೆ ನಡೆದು 8 ಗಂಟೆಗಳ ಒಳಗೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಲಲಿತಾ ಬೋವಿ (41) ಮತ್ತು ಭದ್ರಾವತಿಯ ಸುಶೀಲಮ್ಮ (64) ಎಂದು ಗುರುತಿಸಲಾಗಿದೆ. ಇವರಿಬ್ಬರು ಖತರ್ನಾಕ್ ಕಳ್ಳಿಯರಾಗಿದ್ದು, ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವುದು, ಪಿಕ್ ಪಾಕೆಟ್ ಹಾಗೂ ಜನಸಂದಣಿಯಲ್ಲಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವ ಚಾಳಿ ಉಳ್ಳವರಾಗಿರುವುದು ಎಂದು ತನಿಖೆಯಿಂದ ತಿಳಿದು ಬಂದಿದೆ. ಇವರ ವಿರುದ್ಧ ಈ ಹಿಂದೆ ದಾವಣಗೆರೆ ಜಿಲ್ಲೆಯಲ್ಲಿ ಹೊನ್ನಾಳಿ ಪೊಲೀಸ್ ಠಾಣೆ ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿ ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ. ಆರೋಪಿತರನ್ನು, ದಸ್ತಗಿರಿ ಮಾಡಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.