ನ್ಯೂಸ್ ನಾಟೌಟ್: ಬೆಂಗಳೂರಿನ ದಂಪತಿಗಳು 30 ಲಕ್ಷ ಸಂಬಳದ ಕೆಲಸವನ್ನು ಬಿಟ್ಟು, ಮನೆ ಮಾರಿ ಸಮೋಸಾ ಅಂಗಡಿ ಇಟ್ಟು ಇದೀಗ ತಿಂಗಳಿಗೆ 45 ಕೋಟಿ ವಹಿವಾಟು ನಡೆಸುತ್ತಿದ್ದಾರೆ ಎಮದು ವರದಿ ತಿಳಿಸಿದೆ.
ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡದಿದ್ದರೆ ಪಾನಿಪುರಿ ಅಂಗಡಿ, ದಿನಸಿ ಅಂಗಡಿ, ಅಥವಾ ಹೋಟೆಲ್ ಏನಾದರೂ ಇಟ್ಟು ವ್ಯಾಪಾರ ಮಾಡಬಹುದು ಎಂಬ ಯೋಚನೆ ಇತ್ತು. ಅದರೆ ಇತ್ತೀಚಿನ ದಿನದಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿದ ನಂತರ ಚಹಾ ಅಂಗಡಿ , ಹೋಟೆಲ್ ಇತ್ಯಾದಿ ವ್ಯವಹಾರ ಮಾಡಿ ಯಶಸ್ಸು ಕಂಡವರು ನಮ್ಮ ಕಣ್ಮುಂದೆ ಇದ್ದಾರೆ.
ಈಗ ಅಂತಹದ್ದೇ ಯಶಸ್ಸಿನ ಕತೆಯೊಂದನ್ನು ಬೆಂಗಳೂರಿನ ದಂಪತಿಗಳು ನಿಜ ಮಾಡಿದ್ದಾರೆ. ಈ ದಂಪತಿಗಳು ಸಮೋಸಾ ಮಾರಾಟ ಮಾಡುತ್ತ ಹೆಸರು ವಾಸಿಯಾಗಿದ್ದು, ಆರೇಳು ವರ್ಷದ ಹಿಂದೆ ಬೆಂಗಳೂರಿನಲ್ಲಿ ಸಮೋಸಾ ಫ್ಯಾಕ್ಟರಿ ಆರಂಭಿಸಿದ್ದ ನಿಧಿ ಸಿಂಗ್ ಮತ್ತು ಅವರ ಪತಿ ಶಿಖರ್ ವೀರ್ ಸಿಂಗ್ ದಂಪತಿ ಇಂದು ಕೋಟಿ ಗಟ್ಟಲೇ ಆದಾಯ ಪಡೆಯುತ್ತಿದ್ದಾರೆ ಎಂಬುದು ವಿಶೇಷ.
ಹರ್ಯಾಣ ಮೂಲದ ಈ ಇಬ್ಬರೂ ಬಯೋಟೆಕ್ ಎಂಜಿನಿಯರುಗಳು. ಶಿಖರ್ ವೀರ್ ಸಿಂಗ್ ಎಂ ಟೆಕ್ ಮಾಡಿ ಬಯೋಕಾನ್ನಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಉನ್ನತ ಮಟ್ಟದ ಸೈಂಟಿಸ್ಟ್ (Chief scientist ) ಎಂದರೆ ಕಡಿಮೆ ಮಟ್ಟದ ಕೆಲಸವಂತೂ ಅಲ್ಲ. ಇನ್ನು, ಅವರ ಪತ್ನಿ ನಿಧಿ ಸಿಂಗ್ ಗುರುಗ್ರಾಮದ ಫಾರ್ಮಾ ಕಂಪನಿಯೊಂದರಲ್ಲಿ ಅವರು ವರ್ಷಕ್ಕೆ 30 ಲಕ್ಷ ರೂ ಸಂಬಳದ ಪ್ಯಾಕೇಜ್ ಪಡೆಯುತ್ತಿದ್ದವರು ಎಂದು ಮಾಹಿತಿ ದೊರೆತಿದೆ.
ಇವರು ಯಾಕೆ ಸಮೋಸಾ ಮಾರುವ ಪರಿಸ್ಥಿತಿಗೆ ಬಂದರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು. ಕೆಲಸ ಕಳೆದುಕೊಂಡು ಅನಿವಾರ್ಯವಾಗಿ ಸಮೋಸಾ ವ್ಯಾಪಾರಕ್ಕೆ ಇಳಿದವರಲ್ಲ. ಕಾರ್ಪೊರೇಟ್ ಕೆಲಸದ ಹೊರಗೂ ಸಂಪಾದನೆ ಮಾಡಬಹುದು ಎಂಬುದನ್ನು ಸಾಧಿಸಹೊರಟವರು ನಿಧಿ ಮತ್ತು ಶಿಖರ್ ಸಿಂಗ್. ಇವರ ಆಲೋಚನೆ ಬೀದಿ ಬದಿಯ ಸಮೋಸಾ ಅಂಗಡಿ ಮಟ್ಟದ್ದಾಗಿರಲಿಲ್ಲ , ಬದಲಾಗಿ ಸಮೋಸ ಎಂಬ ಒಂದು ಉತ್ಪನ್ನವನ್ನು ಇಟ್ಟುಕೊಂಡು ಇವರು ಕಾರ್ಪೊರೇಟ್ ಮಟ್ಟದ ಚಿಂತನೆ ಮತ್ತು ಬಂಡವಾಳ ಹೂಡಿ ವ್ಯಾಪಾರ ಶುರುಮಾಡಿದ್ದರು.
2016ರಲ್ಲಿ ನಿಧಿ ಸಿಂಗ್ ಮತ್ತು ಶಿಖರ್ ವೀರ್ ಸಿಂಗ್ ಬೆಂಗಳೂರಿನಲ್ಲಿ ಸಮೋಸಾ ಸಿಂಗ್ ಎಂಬ ಅಂಗಡಿ ಆರಂಭಿಸಿದರು. ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ವ್ಯವಹಾರ ನಡೆಯಲಿಲ್ಲವಾದರೂ ನಂತರದ ದಿನಗಳಲ್ಲಿ ಸಮೋಸಾಗೆ ಬೇಡಿಕೆ ಹೆಚ್ಚಾಯಿತು. ಸಮೋಸಾ ಅಂಗಡಿಗೆ ಜಾಗ ಸಾಕಾಗುವುದಿಲ್ಲ, ವಿಶಾಲ ಸ್ಥಳದ ಅವಶ್ಯತೆ ಇದೆ ಎನಿಸಿದಾಗ ಈ ದಂಪತಿ ಹಿಂದೆ ಮುಂದೆ ನೋಡದೇ ತಾವಿದ್ದ ಅಪಾರ್ಟ್ಮೆಂಟನ್ನೇ ಮಾರಿ ಆ ದುಡ್ಡಿನಲ್ಲಿ ಒಂದು ಫ್ಯಾಕ್ಟರಿಯನ್ನು ಬಾಡಿಗೆ ಪಡೆದರು. 80 ಲಕ್ಷ ರೂ ಖರ್ಚು ಮಾಡಿ ಸಮೋಸಾ ತಯಾರಿಕೆಗೆ ಕಿಚನ್ ಸಿದ್ಧಪಡಿಸಿದರು.
ಸಮೋಸಾ ಸಿಂಗ್ ಅಂಗಡಿಯಲ್ಲಿ ಪ್ರತೀ ತಿಂಗಳು ಸರಾಸರಿ 30,000 ಸಮೋಸಾ ಮಾರಾಟ ಆಗುತ್ತದೆ. ತಿಂಗಳಿಗೆ 45 ಕೋಟಿ ರೂ ವಹಿವಾಟು ನಡೆಯುತ್ತದೆ. ಅಂದರೆ ದಿನಕ್ಕೆ 12 ಲಕ್ಷ ರೂಪಾಯಿಯಷ್ಟು ವಹಿವಾಟು ಆಗುತ್ತದೆ. ಇದೀಗ ಸಮೋಸಾ ಸಿಂಗ್ನ ಫ್ರಾಂಚೈಸಿ ವ್ಯವಹಾರವನ್ನೂ ಇವರು ಹಂಚುತ್ತಿದ್ದಾರೆ. ಜೆಪಿ ನಗರ, ಬನಶಂಕರಿ ಹೀಗೆ ಬೆಂಗಳೂರಿನ ವಿವಿಧೆಡೆ ಈಗ ಸಮೋಸಾ ಸಿಂಗ್ ಫ್ರಾಂಚೈಸಿ ಅಂಗಡಿಗಳನ್ನು ಕಾಣಬಹುದಾಗಿದೆ.