ನ್ಯೂಸ್ ನಾಟೌಟ್: ರೈಲ್ವೆ ನಿಲ್ದಾಣದಲ್ಲಿನ ಎಲ್ ಇಡಿ ಸ್ಕ್ರೀನ್ ನಲ್ಲಿ 3 ನಿಮಿಷಗಳ ಕಾಲ ಅಶ್ಲೀಲ ದೃಶ್ಯಗಳು ಪ್ರಸಾರವಾಗಿ ನೂರಾರು ಮಂದಿ ಪ್ರಯಾಣಿಕರು ಮುಜುಗರಕ್ಕೊಳಗಾದ ಘಟನೆ ಬಿಹಾರದ ಪಾಟ್ನಾದಲ್ಲಿ ಭಾನುವಾರ ಮಾ.19 ರಂದು ನಡೆದಿದೆ.
ಬೆಳಗ್ಗೆ 9:30 ರ ವೇಳೆಗೆ ಪಾಟ್ನಾ ರೈಲು ನಿಲ್ದಾಣದಲ್ಲಿ ಅಳವಡಿಸಿರುವ ಜಾಹೀರಾತನ್ನು ಪ್ರದರ್ಶಿಸುವ ಎಲ್ ಇಡಿ ಸ್ಕ್ರೀನ್ ಮೇಲೆ ಏಕಾಏಕಿ ಅಶ್ಲೀಲ ದೃಶ್ಯಗಳು ಪ್ರಸಾರವಾಗಿವೆ. ಸಾರ್ವಜನಿಕರ ಮುಂದೆ ಇಂಥ ದೃಶ್ಯಗಳು ಪ್ರಸಾರವಾದ ಹಿನ್ನೆಲೆ ಪ್ರತಿಯೊಬ್ಬರು ಮುಜುಗರಕ್ಕೆ ಒಳಗಾಗಿದ್ದಾರೆ.
ಕೂಡಲೇ ಕೆಲವರು ಸರ್ಕಾರಿ ರೈಲ್ವೆ ಪೊಲೀಸ್ (GRP) ಮತ್ತು ರೈಲ್ವೇ ರಕ್ಷಣಾ ಪಡೆ (RPF) ಯಲ್ಲಿ ದೂರು ನೀಡಿದ್ದಾರೆ.
ಪೊಲೀಸರು ಜಾಹೀರಾತು ಪ್ರದರ್ಶನ ಮಾಡುವ ಸಂಸ್ಥೆ ದತ್ತಾ ಕಮ್ಯುನಿಕೇಷನ್ ಅವರಲ್ಲಿ ಈ ಬಗ್ಗೆ ವಿಚಾರಿಸಿ ಸಂಸ್ಥೆಗೆ ಜಾಹೀರಾತು ಪ್ರಸಾರ ಮಾಡಲು ನೀಡಿದ ಜಾಹೀರಾತು ಗುತ್ತಿಗೆಯನ್ನು ರದ್ದುಗೊಳಿಸಿದೆ. ಆ ಸಂಸ್ಥೆಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದು, ಈ ಕುರಿತು ರೈಲ್ವೆ ಇಲಾಖೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.