ನ್ಯೂಸ್ ನಾಟೌಟ್: ದಿಲ್ಲಿಯ ಶಾಹದಾರದಲ್ಲಿ ಇಬ್ಬರು ಮಾಂಸ ಮಾರಾಟಗಾರರೊಂದಿಗೆ ಪೊಲೀಸರು ಅಮಾನುಷವಾಗಿ ವರ್ತಿಸಿದ ಪ್ರಕರಣವೊಂದು ಮಾರ್ಚ್ ೭ರಂದು ಬೆಳಕಿಗೆ ಬಂದಿದೆ. ಪೊಲೀಸರು ಮಾಂಸ ಮಾರಾಟಗಾರರನ್ನು ಥಳಿಸಿದ್ದಲ್ಲದೆ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಾರ್ಚ್ 7ರಂದು ಆನಂದ್ ವಿಹಾರ್ ಪ್ರದೇಶದಲ್ಲಿ ಮಾಂಸ ಮಾರಾಟಗಾರರಿಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಸ್ಕೂಟರ್ಗೆ ಡಿಕ್ಕಿ ಹೊಡೆದಾಗ ಘಟನೆ ಪ್ರಾರಂಭವಾಯಿತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಆರೋಪಿಗಳು ‘ಗೋರಕ್ಷಕ’ ಎಂದು ಹೇಳಿಕೊಂಡು ಸಂತ್ರಸ್ತರ ಮುಖದ ಮೇಲೆ ಮೂತ್ರ ವಿಸರ್ಜಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ನ ಪ್ರಕಾರ, ಗಾಜಿಪುರ ಮೂಲದ ಕಸಾಯಿಖಾನೆಗೆ ಮಾಂಸ ಸರಬರಾಜು ಮಾಡುವ ನವಾಬ್, ತನ್ನ ಸೋದರಸಂಬಂಧಿ ಶೋಯೆಬ್ನೊಂದಿಗೆ ಮುಸ್ತಫಾಬಾದ್ನಲ್ಲಿರುವ ತನ್ನ ಮನೆಗೆ ತನ್ನ ಕಾರಿನಲ್ಲಿ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಅವರ ಕಾರು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಚಾಲಕನೊಂದಿಗೆ ಜಗಳವಾದ ನಂತರ ಪಿಸಿಆರ್ ಬಂದು 2500 ರೂ.ಗಳನ್ನು ತೆಗೆದುಕೊಂಡು ಸ್ಕೂಟರ್ ಚಾಲಕನಿಗೆ ನೀಡಿದ್ದಾನೆ. ಆದರೆ, ಆ ನಂತರ ಪೊಲೀಸರು 15 ಸಾವಿರ ರೂ.ಗೆ ಬೇಡಿಕೆ ಇವರ ಜೊತೆ ಬೇಡಿಕೆ ಇಟ್ಟಿದ್ದಾರೆ, ಹಣ ನೀಡದಿದ್ದರೆ ಠಾಣೆಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ.
ಘಟನೆ ನಂತರ ಸಂತ್ರಸ್ತರಿಬ್ಬರೂ ತಕ್ಷಣ ಪೊಲೀಸರ ಮೊರೆ ಹೋಗಿದ್ದು ಆದರೆ ಘಟನೆ ನಡೆದ ನಾಲ್ಕು ದಿನಗಳ ನಂತರ ಎಫ್ಐಆರ್ ದಾಖಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಎಲ್ಲಾ ಏಳು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ, ಇದರಲ್ಲಿ ಮೂವರು ಪೊಲೀಸರು ಸೇರಿದ್ದಾರೆ. ಈ ಪೈಕಿ ಒಬ್ಬ ಸಹಾಯಕ ಸಬ್ ಇನ್ಸ್ಪೆಕ್ಟರ್ ಅಮಾನತುಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಣ ಕೊಡಲು ಒಪ್ಪದಿದ್ದಕ್ಕೆ ಪೊಲೀಸರು ಇನ್ನೂ ನಾಲ್ವರು ಪರಿಚಿತರನ್ನು ಕರೆಸಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಥಳಿಸಿ, ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.