ನ್ಯೂಸ್ ನಾಟೌಟ್: ಪೊಲೀಸರು ಆರೋಪಿಯನ್ನು ಅಪಹರಿಸಿ ಆತನ ಸಂಬಂಧಿಕರ ಬಳಿ 40 ಲಕ್ಷ ರೂ.ಗೆ ಬೇಡಿಕೆ ಇಟ್ಟ ವಿಚಿತ್ರ ಘಟನೆಯೊಂದು ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಮಾರ್ಚ್ 19ಕ್ಕೆ ಪ್ರಕರಣ ದಾಖಲಾಗಿದೆ.
ಇದೀಗ ಮಾರತ್ತಹಳ್ಳಿ ಪಿಎಸ್ಐ ರಂಗೇಶ್ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಎಫ್ಐಆರ್ ದಾಖಲಾದ ವಿಚಾರ ತಿಳಿಯುತ್ತಿದ್ದಂತೆಯೇ ಆರೋಪಿ ಪೊಲೀಸರು ತಲೆಮರೆಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ತನಿಖೆ ವೇಳೆ ಪೊಲೀಸರೇ ಅಪಹರಣ ಎಸಗಿರುವುದು ತಿಳಿದುಬಂದಿದ್ದು, ಇದರ ಬೆನ್ನಲ್ಲೇ ಎಲ್ಲರನ್ನೂ ಬಂಧಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ.
ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದ ಆರೋಪಿ ರಾಮಾಂಜನಿ ಎಂಬಾತನನ್ನು ಮಾರ್ಚ್ 18 ರ ಸಂಜೆ 4.30 ಕ್ಕೆ ಅಪಹರಣ ಮಾಡಲಾಗಿತ್ತು. ಈ ವಿಚಾರವಾಗಿ ರಾಮಾಂಜನಿಯ ಸಂಬಂಧಿ ಶಿವರಾಮಯ್ಯ ಎಂಬವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಕೂಡಲೇ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದ ಬಾಗಲೂರು ಪೊಲೀಸರು ರಾಮಾಂಜನಿಯನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಪೊಲೀಸರೇ ಅಪಹರಣ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾನೆ.
40 ಲಕ್ಷ ಲಂಚಕ್ಕಾಗಿ ಪಿಎಸ್ಐ ರಂಗೇಶ್ ಹಾಗೂ ಇತರರು ಆರೋಪಿ ರಾಮಾಂಜನಿಯ ತಲೆಗೆ ಗನ್ ಇಟ್ಟು ಹಣಕ್ಕಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.