ನ್ಯೂಸ್ ನಾಟೌಟ್: ಮುಂಬೈನಲ್ಲಿ ಬದುಕಿರುವ ವ್ಯಕ್ತಿಯನ್ನು ‘ಸತ್ತ’ ಎಂದು ಘೋಷಿಸಿ ಜೀವ ವಿಮಾ ಸಂಸ್ಥೆಗೆ ಕೋಟ್ಯಂತರ ರೂಪಾಯಿ ವಂಚಿಸಲು ಯತ್ನಿಸಿದ ಮೂವರನ್ನು ಮಾರ್ಚ್ 8 ಕ್ಕೆ ಬಂಧಿಸಲಾಗಿದೆ. ಆರೋಪಿಗಳನ್ನು ದಿನೇಶ್ ತಕ್ಸಾಲೆ, ಅನಿಲ್ ಲಟ್ಕೆ ಮತ್ತು ವಿಜಯ್ ಮಾಳವಾಡೆ ಎಂದು ಗುರುತಿಸಲಾಗಿದೆ.
ಮುಂಬೈ ಪೊಲೀಸ್ ಡಿಸಿಪಿ ಮನೋಜ್ ಪಾಟೀಲ್ ಫೆಬ್ರವರಿ 21, 2023 ರಂದು ಎಲ್ಐಸಿ ಅಧಿಕಾರಿ ಓಂಪ್ರಕಾಶ್ ಸಾಹು ಅವರ ದೂರಿನ ಆಧಾರದ ಮೇಲೆ ಐಪಿಸಿಯ ಸೆಕ್ಷನ್ 465, 467, 468, 479, 420, 120 (ಬಿ) ಮತ್ತು 511 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯನ್ನು ಪ್ರಾರಂಭಿಸಲಾಗಿತ್ತು.
ದಿನೇಶ್ ತಕಸಾಲೆ ಎಂಬ ವ್ಯಕ್ತಿ 2015ರ ಏಪ್ರಿಲ್ 21ರಂದು ಎಲ್ ಐಸಿಯಿಂದ 2 ಕೋಟಿ ರೂ.ಗಳ ಪಾಲಿಸಿ ತೆಗೆದುಕೊಂಡಿದ್ದು, ನಂತರ ಆರೋಪಿಯು ಸುಮಾರು ಒಂದು ವರ್ಷ ಕಾಲ ಸಕಾಲದಲ್ಲಿ ಪ್ರೀಮಿಯಂ ಪಾವತಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದಾದ ನಂತರ 2017ರ ಮಾರ್ಚ್ 14 ರಂದು ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರೆ ಆರೋಪಿಗಳು ಪುಣೆಯ ಬೆಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2016ರ ಡಿ.25ರಂದು ರಸ್ತೆ ಅಪಘಾತದಲ್ಲಿ ದಿನೇಶ್ ಮೃತಪಟ್ಟಿದ್ದಾರೆ ಎಂದು ವಿಮೆಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಸ್ವೀಕರಿಸಿದ ಎಲ್ಐಸಿ ತನಿಖೆ ಆರಂಭಿಸಿದ್ದು, ಸುಮಾರು 6 ವರ್ಷಗಳ ತನಿಖೆಯ ನಂತರ ದಿನೇಶ್ ಸತ್ತಿಲ್ಲ ಎಂಬುದು ಎಲ್ಐಸಿಗೆ ತಿಳಿಯಿತು. ಎಲ್ ಐಸಿಯ ಪಾಲಿಸಿ ಖರೀದಿಸಲು ದಿನೇಶ್ ನೀಡಿದ್ದ ದಾಖಲೆಗಳೂ ಕೂಡ ನಕಲಿ ಎಂಬುದು ತನಿಖೆ ವೇಳೆ ಎಲ್ ಐಸಿಗೆ ಗೊತ್ತಾಗಿದೆ.
ಡಿಸಿಪಿ ಪಾಟೀಲ್ ಮಾತನಾಡಿ, ಪಾಲಿಸಿ ಖರೀದಿಸುವಾಗ ದಿನೇಶ್ ಅವರು ಕೃಷಿ ಮಾಡುವುದಾಗಿ ಎಲ್ಐಸಿಗೆ ತಿಳಿಸಿದ್ದರು ಮತ್ತು ವರ್ಷಕ್ಕೆ ಸುಮಾರು 35 ಲಕ್ಷ ರೂ. ಆದಯವಿದೆ, ಇದಲ್ಲದೆ ಮೆಸ್ ಕೂಡ ನಡೆಸುತ್ತಿದ್ದು, ವರ್ಷಕ್ಕೆ 7-8 ಲಕ್ಷ ರೂ. ಆದಾಯವಿರುವುದಾಗಿ ನಕಲಿ ದಾಖಲೆಗಳನ್ನು ಕೊಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ. ದಿನೇಶ್ ತಕ್ಸಾಲೆ ವಿಮಾ ಪಾಲಿಸಿಯನ್ನು ಮೋಸ ಮಾಡುವ ಉದ್ದೇಶದಿಂದಲೇ ಖರೀದಿಸಿದ್ದು, ನಕಲಿ ದಾಖಲೆಗಳ ಆಧಾರದಲ್ಲಿ ಒಂದು ವರ್ಷಗಳ ಕಾಲ ಕಂತಿನ ಹಣವನ್ನು ಕಟ್ಟಿ ಆ ನಂತರ ಇಬ್ಬರು ಗೆಳೆಯರ ಜೊತೆಗೂಡಿ ದಿನೇಶ್ ಸತ್ತಿರುವಂತೆ ಸಾಬೀತುಪಡಿಸಿ ಎರಡು ಕೋಟಿಯ ವಿಮೆಯ ಹಣ ಪಡೆಯಲು ಯತ್ನಿಸಿದ್ದರು ಎನ್ನಲಾಗಿದೆ.