ನ್ಯೂಸ್ ನಾಟೌಟ್: ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಬೆಂಕಿ ಕಾಣಿಸುತ್ತಿದೆ. ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಮೂರು ದಿನದ ಹಿಂದೆ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಾಡುಕಿಚ್ಚು ಕಾಣಿಸಿಕೊಂಡಿತ್ತು. ಅರಣ್ಯ ಸಿಬ್ಬಂದಿಗಳ ಜೊತೆಗೆ ಗ್ರಾಮಸ್ಥರು ಸಹಕರಿಸಿ ಬೆಂಕಿ ನಂದಿಸಿದ್ದರು. ಆದರೆ ಮರು ದಿನ ಸಂಜೆ ವೇಳೆಗೆ ಮತ್ತೆ ಕಾಡಿನೊಳಗೆ ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರು.
ಬೆಂಕಿಯ ಕಿಡಿ ಅಲ್ಲಲ್ಲಿ ಹರಡಿರುವುದರಿಂದ ಬಿಸಿಲು ಹಾಗೂ ಗಾಳಿಗೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಾ.2 ರಂದು ಸಂಜೆ ವೇಳೆಗೆ ಹಳೆನೇರೆಂಕಿ ಗ್ರಾಮದ ಕೆಮ್ಮಿಂಜೆ, ಪಾದ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆ ವ್ಯಾಪಕವಾಗಿ ಹರಡುತ್ತಿದ್ದು ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು, ಗಿಡಗಂಟಿಗಳು ಆಹುತಿಯಾಗಿವೆ ಎಂದು ತಿಳಿದು ಬಂದಿದೆ. ಅರಣ್ಯದೊಳಗೆ ಅಗ್ನಿಶಾಮಕ ವಾಹನ ಸಂಚಾರಕ್ಕೆ ಮಾರ್ಗವೂ ಇಲ್ಲದೇ ಇರುವುದರಿಂದ ಬೆಂಕಿ ನಂದಿಸಲು ಹರಸಾಹಸವನ್ನೇ ಪಡಬೇಕಾಗಿದೆ.