ನ್ಯೂಸ್ ನಾಟೌಟ್: ಚುನಾವಣೆ ಸಮೀಪಿಸುತ್ತಿದ್ದಂತೆ ಹಣ, ಮದ್ಯ, ಚಿನ್ನ ಸಾಗಾಟವಾಗಲು ಆರಂಭವಾಗಿದೆ ಎಂಬ ಸುದ್ದಿಗಳು ಆಗಾಗೆ ಪ್ರಸಾರವಾಗುತ್ತಿರುತ್ತವೆ. ಇದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ಮಾರ್ಚ್ 27ರ ರಾತ್ರಿ ಚಿಕ್ಕಮಗಳೂರಿನಲ್ಲಿ ಅಪಘಾತಕ್ಕೀಡಾದ ಕಾರಿನಲ್ಲಿ ಸಿಟಿ ರವಿ ಭಾವಚಿತ್ರವಿರುವ ಕ್ಯಾಲೆಂಡರ್ ಹಾಗೂ ಮದ್ಯದ ಜೊತೆಗೆ ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ವರದಿ ತಿಳಿಸಿದೆ.
ಕಾರಿನ ಬ್ರೇಕ್ ಡೌನ್ ಆಗಿ ಜೀಪ್ಗೆ ಡಿಕ್ಕಿ ಹೊಡೆದ ಘಟನೆ ಮಾ.27 ರಂದು ಚಿಕ್ಕಮಗಳೂರು ನಗರದ ಎಐಟಿ ಸರ್ಕಲ್ನಲ್ಲಿ ತಡರಾತ್ರಿ ನಡೆದಿದೆ. ಈ ವೇಳೆ ಕಾರು ತಳ್ಳಲು ಮುಂದಾದಾಗ ಚಾಲಕ ಹಾಗೂ ಅಲ್ಲಿದ್ದವರ ನಡುವೆ ಮಾತಿನ ಚಕಮಕಿಯೂ ನಡೆದಿದೆ.
ಕಾರು ಪರಿಶೀಲಿಸಿದ ಸ್ಥಳೀಯರು ಚಕಿತರಾಗಿದ್ದು, ಲಕ್ಷಾಂತರ ಮೌಲ್ಯದ ಮದ್ಯ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಭಾವಚಿತ್ರ ಇರುವ ಕ್ಯಾಲೆಂಡರ್ಗಳು ಪತ್ತೆಯಾಗಿದೆ. ಕರ್ನಾಟಕ ಚುನಾವಣೆ ಹೊತ್ತಲ್ಲೇ ಲಕ್ಷಾಂತರ ಮೌಲ್ಯದ ಮಾಲ್ಗಳು ಪತ್ತೆಯಾಗಿರುವುದರಿಂದ ಆಕ್ರೋಶಗೊಂಡ ಕೆಲವು ಸ್ಥಳೀಯರು ಸಿಟಿ ರವಿ ವಿರುದ್ಧ ಒಟಿ ರವಿ ಎಂದು ಘೋಷಣೆ ಕೂಗಿದ್ದಾರೆ.
ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಗೆಯೇ ಕಾರಿನಲ್ಲಿ ಸಿಕ್ಕಂತಹ ಮಾರಕಾಸ್ತ್ರಗಳನ್ನು ನಗರ ಪೊಲೀಸರಿಗೆ ಒಪ್ಪಿಸಲಾಗಿದೆ.