ನ್ಯೂಸ್ ನಾಟೌಟ್: ಅಖಿಲ ಭಾರತ ವೈದ್ಯಕೀಯ ವಿಜ್ಷಾನಗಳ ಸಂಸ್ಥೆ (ಏಮ್ಸ್) ಇಲ್ಲಿನ ವೈದ್ಯರು, ವೈದ್ಯಕೀಯ ಜಗತ್ತಿನಲ್ಲೇ ತೀರಾ ಅಪರೂಪ ಎನಿಸುವ ಸಾಧನೆಯನ್ನು ಮಾಡಿದ್ದಾರೆ. ಹೌದು, ತಾಯಿ ಗರ್ಭದಲ್ಲಿರುವ ಮಗುವಿನ ಪುಟ್ಟ ಹೃದಯಕ್ಕೆ ಯಶಸ್ವಿಯಾಗಿ ಬಲೂನ್ ಡಿಲೇಶನ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಹಿಂದೆ ಮೂರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದ 28 ವರ್ಷದ ಗರ್ಭಿಣಿಯೊಬ್ಬರು ಏಮ್ಸ್ ಗೆ ದಾಖಲಾಗಿದ್ದರು. ಗರ್ಭದಲ್ಲಿರುವ ಮಗುವಿನಲ್ಲಿ ಹೃದಯ ಸಮಸ್ಯೆ ಇರುವುದನ್ನು ಗಮನಿಸಿದ ವೈದ್ಯರು ದಂಪತಿಯ ಗಮನಕ್ಕೆ ತಂದರು. ತಾಯಿ, ಮಗುವನ್ನು ಉಳಿಸಕೊಳ್ಳಲೇ ಬೇಕು ಎಂದು ಪಟ್ಟು ಹಿಡಿದು ಮಗುವಿನ ಹೃದಯ ಸಮಸ್ಯೆ ಸರಿಪಡಿಸಲು ಈ ಅಪರೂಪದ ಚಿಕಿತ್ಸೆ ನೆರವೇರಿಸಲು ಒಪ್ಪಿಗೆ ನೀಡಿದರು.
ಏಮ್ಸ್ ಹೃದ್ರೋಗ ಕೇಂದ್ರದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಹೃದಯ ಶಸ್ತ್ರ ಚಿಕಿತ್ಸಕರು ಮತ್ತು ಭ್ರೂಣ ಔಷಧ ತಜ್ಞರು ಯಶಸ್ವಿಯಾಗಿ ಈ ಶಸ್ತ್ರ ಚಿಕಿತ್ಸೆಯನ್ನು ನೆರವೇರಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ‘ಬಲೂನ್ ಡಿಲೇಷನ್’ ಎಂಬ ಹೆಸರಿನಿಂದ ಕರೆಯಲಾಗುತ್ತಿದ್ದು, ಅಲ್ಟ್ರಾಸೌಂಡ್ ತಂತ್ರಜ್ಞಾನದ ಮೂಲಕ ಈ ಪ್ರಕ್ರಿಯೆ ನಡೆಸಲಾಗಿದೆ. ಬಲೂನ್ ಕ್ಯಾತಿಟರ್ ಮೂಲಕ ರಕ್ತ ಪರಿಚಲನೆಗೆ ಅಡ್ಡಿಯಾಗಿದ್ದ ಕವಾಟವನ್ನು ತೆರೆದು ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಅಲ್ಲದೇ ತಾಯಿ – ಮಗುವಿನ ಆರೋಗ್ಯದ ಕುರಿತಾಗಿ ಮಾತನಾಡಿದ ವೈದ್ಯರು,’ ಮಗು ತಾಯಿಯ ಉದರದಲ್ಲಿರುವಾಗಲೇ ಉಂಟಾಗುವ ಕೆಲವು ಹೃದಯ ಕಾಯಿಲೆಗಳನ್ನು ವಾಸಿ ಮಾಡಬಹುದು. ಹೊಟ್ಟೆಯಲ್ಲೇ ಅವುಗಳಿಗೆ ಚಿಕಿತ್ಸೆ ನೀಡುವುದರಿಂದ ಜನನದ ಬಳಿಕ ಮಗುವಿಗೆ ಮುಂದೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯ ಮಗುವಿನಂತೆ ಬೆಳವಣಿಗೆ ಉಂಟಾಗುತ್ತದೆ’ ಎಂದು ವೈದ್ಯರು ತಿಳಿಸಿದ್ದಾರೆ.