ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬಿಚ್ಚಿ ಬೀಳಿಸಿದ್ದ ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಮನೆಯಲ್ಲಿ ವರ್ಷದ ಹಿಂದೆ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೋರ್ವ ಪ್ರಮುಖ ಆರೋಪಿಯನ್ನು ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಎ೧ ಆರೋಪಿಯಾಗಿದ್ದ ಸ್ಯಾಮ್ಸನ್ ಅನ್ನುವ ವ್ಯಕ್ತಿಯನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತ ಪ್ರಕರಣದ ಪ್ರಮುಖ ರೂವಾರಿಯಾಗಿದ್ದ. ಈತನನ್ನು ಮಾರುವೇಷದಲ್ಲಿ ಹೋಗಿ ರಾತ್ರೋ ರಾತ್ರಿ ಪೊಲೀಸರು ಆತನ ಮನೆಯಿಂದಲೇ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಇಬ್ಬರು ತಲೆ ಮರೆಸಿಕೊಂಡಿದ್ದು ಅವರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಮಾರ್ಚ್ ೨೦ರಂದು ಮಾರಕಾಸ್ತ್ರ ಸಜ್ಜಿತ ದರೋಡೆಕೋರರ ತಂಡ ಸಂಪಾಜೆಯ ಚಟ್ಟೆಕಲ್ಲಿನ ಅಂಬರೀಶ್ ಭಟ್ ಅವರ ಅಂಬಾಶ್ರಮ ಮನೆಗೆ ನುಗ್ಗಿ ಅತ್ತೆ ಹಾಗೂ ಸೊಸೆಯನ್ನು ಮಚ್ಚು ಹಿಡಿದು ಬೆದರಿಸಿ 100 ಗ್ರಾಂ. ಚಿನ್ನ ಹಾಗೂ ೫.೫ ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು.
ಅಂಬರೀಶ್ ಭಟ್ ಸಂಪಾಜೆಯ ಜನರಿಗೆ ಹೆಚ್ಚು ಚಿರಪರಿಚಿತರಾಗಿದ್ದು ದೇವರ ಪೂಜಾ ಕಾರ್ಯ, ಜ್ಯೋತಿಷ್ಯ ಶಾಸ್ತ್ರದಲ್ಲಿ ಅವರ ಕುಟುಂಬ ವಂಶಪಾರಂಪರ್ಯದಿಂದಲೇ ಬಹಳಷ್ಟು ಹೆಸರನ್ನು ಗಳಿಸಿದ ಕುಟುಂಬ. ಅಂಬರೀಶ್ ಭಟ್ ಸಮಾಜದಲ್ಲಿ ಧಾರ್ಮಿಕ ಕಾರ್ಯಗಳಿಂದ ಗುರುತಿಸಿಕೊಂಡವರು. ಅವರ ಇಬ್ಬರು ಪುತ್ರರು ಶ್ರೀವತ್ಸ ಹಾಗೂ ಶ್ರೀನಿಧಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನೀಯರ್ ಉದ್ಯೋಗದಲ್ಲಿದ್ದಾರೆ. ಶ್ರೀವತ್ಸ ತಮ್ಮ ಪತ್ನಿ, ಇಬ್ಬರು ಅವಳಿ ಮಕ್ಕಳೊಂದಿಗೆ ಊರಿಗೆ ಬಂದಿದ್ದರು. ಕಳ್ಳತನ ನಡೆದ ದಿನ ಶ್ರೀವತ್ಸ ಹಾಗೂ ಅಂಬರೀಶ್ ಭಟ್ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕಳ್ಳರ ಗುಂಪೊಂದು ಮನೆಗೆ ನುಗ್ಗಿದೆ. ಮೊದಲು ಬಂದವರೇ ಶ್ರೀವತ್ಸ ಅವರ ಪತ್ನಿಯ ತಾಳಿ ಸರವನ್ನು ಕಿತ್ತುಕೊಂಡಿಕೊಂಡಿದ್ದರು. ಆಗ ತಾನೆ ತೊಟ್ಟಿಲಲ್ಲಿ ಮಲಗಿದ್ದ ಅವಳಿ ಮಕ್ಕಳಿಗೆ ಏನೂ ಮಾಡಬೇಡಿ ಎಂದು ಮನೆಯವರು ಗೊಗರೆದಿದ್ದಾರೆ. ಎಳನೀರು ಕಡಿಯವ ಮಚ್ಚು ಹಿಡಿದಿದ್ದ ದರೋಡೆಕೋರರು ಮನೆಯ ಬೀರುವಿನ ಕೀಲಿ ಕೈ ನೀಡುವಂತೆ ಹೇಳಿದ್ದರು. ಜೀವ ಭಯದಿಂದ ಮಹಿಳೆಯರು ಕೀ ನೀಡಿದ್ದರು. ಅದರಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಕತ್ತಲಲ್ಲಿ ಪರಾರಿಯಾಗಿದ್ದರು. ಘಟನೆಗೆ ಸಂಬಂಧಪಟ್ಟಂತೆ ಬಹುತೇಕ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಇದೀಗ ಎ೧ ಆರೋಪಿಯೂ ಸೆರೆ ಸಿಕ್ಕಿರುವುದರಿಂದ ಸಹಜವಾಗಿಯೇ ಪೊಲೀಸರ ಪತ್ತೆ ಕಾರ್ಯದಲ್ಲಿ ಮಹತ್ವದ ತಿರುವು ಸಿಕ್ಕಿದೆ.