ನ್ಯೂಸ್ ನಾಟೌಟ್ : ಇತ್ತೀಚಿಗೆ ಮಂಗಳೂರು ಮತ್ತು ಸುತ್ತಲಿನ ನಗರಗಳಲ್ಲಿ ಮೊಬೈಲ್ ಕಳ್ಳತನ ಪ್ರಕರನಗಳು ಹೆಚ್ಚಾಗಿ ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ಗಳನ್ನು 24 ಗಂಟೆಯೊಳಗೆ ಪತ್ತೆ ಹಚ್ಚುವ ಹೊಸ ಪೋರ್ಟಲ್ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿದೆ.
ಮಂಗಳೂರಿನ ವ್ಯಾಪ್ತಿಯಲ್ಲಿ ಮೊಬೈಲ್ ಕಳವು ಪ್ರಕರಣ ಮತ್ತು ಕಳವಾದ ಮೊಬೈಲ್ ಫೋನ್ಗಳ ದುರ್ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಅಂತಹ ಫೋನ್ ಗಳನ್ನು ಬ್ಲಾಕ್ ಮಾಡುವ ನೂತನ ವ್ಯವಸ್ಥೆಯನ್ನು ದ.ಕ.ಜಿಲ್ಲಾ ಪೊಲೀಸ್ ಇಲಾಖೆಯು ಸಿಇಐಆರ್ ಪೋರ್ಟಲ್ (CEIR Portal) ಮೂಲಕ ಜಾರಿಗೆ ತರಲಾಗಿದೆ.
ಈ ಪೋರ್ಟಲ್ ಮೂಲಕ 24 ಗಂಟೆಯಲ್ಲಿ 7 ಕಾಣೆಯಾದ ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್ ಮೂಲಗಲು ಮಾಹಿತಿ ನೀಡಿವೆ. ಅಷ್ಟೆ ಅಲ್ಲದೆ ಕಳೆದು ಹೋಗಿದ್ದ 4 ಮೊಬೈಲ್ ಫೋನ್ಗಳನ್ನು ಸೈಬರ್ ಅಪರಾಧಗಳ ಪೊಲೀಸ್ ಠಾಣೆ, ಉಪ್ಪಿನಂಗಡಿ, ಪುತ್ತೂರು ನಗರ, ಸುಳ್ಯ ಪೊಲೀಸ್ ಠಾಣಾಧಿಕಾರಿಗಳ ಮೂಲಕ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ಮೊಬೈಲ್ ಕಳೆದು ಹೋದರೆ, ಕಳವಾದರೆ, ಸುಲಿಗೆಯಾದರೆ ತಕ್ಷಣವೇ E-LOST ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿ, ಸ್ವೀಕೃತಿ ಪಡೆದು ನಂತರ ಮಾಹಿತಿಯನ್ನು CEIR ಪೋರ್ಟಲ್ನಲ್ಲಿ ನಮೂದಿಸಬೇಕು. ಇದರಿಂದ ಕಳೆದು ಹೋದ, ಕಳವಾದ, ಸುಲಿಗೆಯಾದ ಮೊಬೈಲ್ ಫೋನ್ಗಳ ದುರ್ಬಳಕೆ ತಡೆಗಟ್ಟಲು ಹಾಗೂ ಅವುಗಳನ್ನು ತಕ್ಷಣ ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಎಸ್ಪಿ ಮನವಿ ಮಾಡಿದ್ದಾರೆ.