ನ್ಯೂಸ್ ನಾಟೌಟ್ : ಮಂಗಳೂರಿನ ನೂತನ ನಗರ ಪೊಲೀಸ್ ಕಮಿಷನರ್ ಆಗಿ ಶುಕ್ರವಾರ ಫೆ.24 ರಂದು ಕುಲದೀಪ್ ಆರ್. ಜೈನ್ ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕುಲದೀಪ್ ಆರ್. ಜೈನ್ ನೂತನ ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದು, ಈ ಹಿಂದೆ ಇದ್ದ ಎನ್.ಶಶಿ ಕುಮಾರ್ ರೈಲ್ವೇ ಡಿಐಜಿ ಆಗಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ಇಂದು ಅಧಿಕಾರ ಸ್ವೀಕರಿಸಿ ಮಾತನಾಡಿದ ಕುಲದೀಪ್ ಕುಮಾರ್ ಜೈನ್, ಭ್ರಷ್ಟಾಚಾರ ಸಹಿಸುವುದಿಲ್ಲ. ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ಎಲ್ಲ ರೀತಿಯ ಅಕ್ರಮ ಚಟುವಟಿಕೆ ತಡೆಗೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲರ ಸಹಕಾರದಿಂದ ಜನರಿಗೆ ಅನುಕೂಲಕರವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು. ಜೊತೆಗೆ ವಾಹನ ಪ್ರಯಾಣಿಕರು ಟ್ರಾಫಿಕ್ ನಿಯಮಗಳನ್ನು ಪಾಲಿಸಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
2011ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿರುವ ಕುಲದೀಪ್ ಆರ್.ಜೈನ್, ಮೂಲತಃ ರಾಜಸ್ಥಾನದವರಾಗಿದ್ದು, ತಮಿಳುನಾಡಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಐಪಿಎಸ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅನುಬವ ಇವರಿಗಿದ್ದು, ಚನ್ನಪಟ್ಟಣ ಎಎಸ್ಪಿ, ಚಾಮರಾಜನಗರ ಎಸ್ಪಿ, ಬಿಜಾಪುರ ಎಸ್ಪಿ, ಬೆಂಗಳೂರು ಸಿಟಿ ಕ್ರೈಂ ಮತ್ತು ಟ್ರಾಫಿಕ್ ಡಿಸಿಪಿ, ಕೆಎಸ್ಆರ್ಪಿ ಹಾಗೂ ಎಸಿಬಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ.