ನ್ಯೂಸ್ ನಾಟೌಟ್: ಉನ್ನತ ಶಿಕ್ಷಣದ ಕನಸು ಕಂಡಿದ್ದ ಪ್ರತಿಭಾವಂತ ದಂತ ವೈದ್ಯ ವಿದ್ಯಾರ್ಥಿನಿಗೆ ಸುಳ್ಯದ ಖಾಸಗಿ ಕಾಲೇಜೊಂದರಲ್ಲಿ ಇತರೆ ಕೆಲವು ವಿದ್ಯಾರ್ಥಿಗಳು ಮಾನಸಿಕ ಕಿರುಕುಳ, ದೈಹಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಕಿರುಕುಳ ನೀಡಿದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ.
ಡಾ| ಪಲ್ಲವಿ ಎಂಬ ದಂತ ವೈದ್ಯಕೀಯ ವಿಭಾಗದ ವೈದ್ಯ ವಿದ್ಯಾರ್ಥಿನಿ ೩ನೇ ವರ್ಷದ ಬಾಯಿ ಮತ್ತು ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅದೇ ಕಾಲೇಜಿನ ಇತರೆ ವಿದ್ಯಾರ್ಥಿಗಳಾದ ಡಾ| ವಿಶಾಕ್, ಡಾ| ಐಶ್ವರ್ಯ ಆರ್, ಡಾ| ಆಲ್ಫಾ ಮೇರಿ ಮ್ಯಾಥ್ಯೂ, ಡಾ| ಡೆನೆಲ್ ಸಬಾಸ್ಟಿನ್, ಡಾ| ರಿಷಿಕೇಶ್, ಡಾ|ದಯಾ ಅನ್ ವರ್ಗಿಸ್ ಹಾಗೂ ಇತರರು ಮಾನಸಿಕ ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಡಾ| ಪಲ್ಲವಿ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು ಮೂಲದ ಡಾ| ಪಲ್ಲವಿ ಪ್ರತಿಭಾವಂತ ವಿದ್ಯಾರ್ಥಿನಿ. ಹಿಂದುಳಿದ ವರ್ಗಕ್ಕೆ ಸೇರಿದವರು. ಇವರಿಗೆ ಸರಕಾರಿ ಸೀಟು ಹೇಗೆ ಸಿಕ್ಕಿತು ಅನ್ನುವ ವಿಚಾರವಾಗಿ ಕಳೆದ ಆರು ತಿಂಗಳಿನಿಂದ ಇತರೆ ವಿದ್ಯಾರ್ಥಿಗಳು ಮಾನಸಿಕ ಹಿಂಸೆ ನೀಡುತ್ತಿದ್ದರು. ಕೋರ್ಸ್ ಬಿಟ್ಟು ಹೋಗುವಂತೆ ಧಮ್ಕಿ ಹಾಕುತ್ತಿದ್ದರು. ಇತ್ತೀಚೆಗೆ ಈ ಪ್ರಕರಣ ವಿಕೋಪಕ್ಕೆ ತಿರುಗಿ ಡಾ| ಪಲ್ಲವಿ ಮೇಲೆ ದೈಹಿಕ ಹಲ್ಲೆ ನಡೆದಿತ್ತು ಅನ್ನುವ ವಿಚಾರವೂ ಇದೀಗ ಬೆಳಕಿಗೆ ಬಂದಿದೆ. ಜೀವ ಬೆದರಿಕೆ, ಜಾತಿ ನಿಂದನೆ ಮಾಡಿರುವ ವಿಚಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.